ಕೋಲಾರ : ಅವರಿಬ್ಬರು ದೂರದ ಸಂಬಂಧಿಗಳು. ಅದರಲ್ಲೂ ಸ್ನೇಹಿತರು. ಮನೆಗೆ ಬರುತ್ತಿದ್ದ ಸ್ನೇಹಿತ ತನ್ನ ಅತ್ತಿಗೆ ಮೇಲೆ ಕಣ್ಣಾಕಿದ ವಿಷಯ ತಿಳಿದು ಎಚ್ಚರಿಕೆ ನೀಡಿದ್ದ. ಆದರೆ ಅಷ್ಟಕ್ಕೆ ಸುಮ್ಮನಾಗದ ಸ್ನೇಹಿತ ಎಚ್ಚರಿಕೆ ನೀಡಿದ್ದ ಸ್ನೇಹಿತನ ಎದೆಗೆ ಚೂರಿ ಹಾಕಿ ಕೊಲೆ ಮಾಡಿರುವಂತಹ ಘಟನೆ ಜಮಾಲ್ ಷಾ ನಗರದಲ್ಲಿ ನಡೆದಿದೆ.
ರೋಹಿದ್ ಅಲಿಯಾಸ್ ಅರ್ಬಾಜ್(26) ಮೃತ ಸ್ನೇಹಿತ.
ಜಮಾಲ್ ಷಾ ನಗರದಲ್ಲಿ ನಿನ್ನೆ ತಡರಾತ್ರಿ ಸುಲ್ತಾನ್ ತಿಪ್ಪಸಂದ್ರದ ಅಮ್ಜಾದ್ ಎಂಬಾತ ರೋಹಿದ್ ಅಲಿಯಾಸ್ ಅರ್ಬಾಜ್ನನ್ನು ಕೊಲೆ ಮಾಡಿದ್ದಾನೆ.
ರೋಹಿದ್ ಮತ್ತು ಅಮ್ಜಾದ್ ದೂರದ ಸಂಬಂಧಿಗಳು ಮತ್ತು ಸ್ನೇಹಿತರಾಗಿದ್ದರು. ಹೀಗಿರುವಾಗ ಅಮ್ಜಾದ್ ಆಗಾಗ ರೋಹಿದ್ ಮನೆಗೆ ಬರುತ್ತಿದ್ದ. ಈ ವೇಳೆ ರೋಹಿದ್ ಅಣ್ಣನ ಹೆಂಡತಿ ಅಂದರೆ ಅತ್ತಿಗೆ ಮೇಲೆ ಕಣ್ಣು ಹಾಕಿದ್ದಾನೆ. ರೋಹಿದ್ಗೆ ತಿಳಿಯದಂತೆ ತನ್ನ ಅತ್ತಿಗೆ ಮೊಬೈಲ್ ನಂಬರ್ ಪಡೆದುಕೊಂಡು ಆಗ್ಗಾಗ ಫೋನ್ ಹಾಗೂ ವಿಡಿಯೋ ಕಾಲ್ ಮಾಡಿ ರೋಹಿದ್ ಅತ್ತಿಗೆಗೆ ಪೀಡಿಸುತ್ತಿದ್ದನಂತೆ. ಈ ವಿಷಯ ತಿಳಿದ ರೋಹಿದ್ ಮತ್ತು ಸಂಬಂಧಿಕರು ಕಳೆದ ಎರಡು ತಿಂಗಳ ಹಿಂದೆ ಅಮ್ಜಾದ್ ಮನೆ ಬಳಿ ಹೋಗಿ ಗಲಾಟೆ ಮಾಡಿ ಎಚ್ಚರಿಕೆ ಕೊಟ್ಟು ಬಂದಿದ್ದರು.
ಅಮ್ಜಾದ್ ಮಾತ್ರ ತನ್ನ ದುರ್ಬುದ್ದಿಯನ್ನು ನಿಲ್ಲಿಸಿರಲಿಲ್ಲ. ಎರಡು ತಿಂಗಳು ಸುಮ್ಮನಿದ್ದು ಮತ್ತೆ ಅವರ ಅತ್ತಿಗೆಗೆ ಫೋನ್ ಮಾಡೋದಕ್ಕೆ ಶುರುಮಾಡಿದ್ದಾನೆ. ಅಷ್ಟೇ ಅಲ್ಲದೆ ಅಮ್ಜಾದ್ ಕಳೆದ ಮೂರು ದಿನಗಳ ಹಿಂದೆ ರೋಹಿದ್ ಎದುರಲ್ಲಿಯೇ ಅವರ ಅತ್ತಿಗೆಗೆ ವಿಡಿಯೋ ಕಾಲ್ ಮಾಡಿದ್ದಾನೆ. ಇದನ್ನು ನೋಡಿದ್ದ ರೋಹಿದ್ ಗಲಾಟೆ ಮಾಡಿ ವಾರ್ನಿಂಗ್ ಮಾಡಿದ್ದ. ಇದಕ್ಕೆ ಅಮ್ಜಾದ್ ಕೂಡ ಕೋಪ ಮಾಡಿಕೊಂಡಿದ್ದ.
ಇನ್ನು ನಿನ್ನೆ ಬೆಂಗಳೂರಿಗೆ ಕೆಲಸದ ಮೇಲೆ ಹೋಗಿದ್ದ ರೋಹಿದ್ ರಾತ್ರಿ ವಾಸಪ್ ಬರುತ್ತಿದ್ದಂತೆ ನಿನ್ನ ಜೊತೆಗೆ ಮಾತನಾಡಬೇಕು ಬಾ ಎಂದು ಅಮ್ಜಾದ್ ಜಮಾಲ್ ಷಾ ನಗರದ ಹೊರಗೆ ಕರೆದಿದ್ದಾನೆ. ಅಮ್ಜಾದ್ ಕರೆದ ಜಾಗಕ್ಕೆ ರೋಹಿದ್ ಹೋಗಿದ್ದಾನೆ. ಈ ವೇಳೆ ಜಗಳ ತೆಗೆದು ರೋಹಿದ್ ಎದೆಗೆ ಚಾಕುವಿನಿಂದ ಇರಿದು ಅಲ್ಲಿಂದ ಅಮ್ಜಾದ್ ಪರಾರಿಯಾಗಿದ್ದಾನೆ.
ವಿಷಯ ತಿಳಿಯುತ್ತಿದ್ದಂತೆ ಕೋಲಾರ ನಗರ ಠಾಣಾ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಜೊತೆಗೆ ಕ್ಷಿಪ್ರಕಾರ್ಯಾಚರಣೆ ನಡೆಸಿ ಕೊಲೆ ಮಾಡಿ ತಲೆಮರೆಸಿಕೊಂಡಿದ್ದ ಆರೋಪಿ ಅಮ್ಜದ್ನನ್ನು ಬಂಧಿಸಿದ್ದಾರೆ. ಹೆಚ್ಚಿನ ಮಾಹಿತಿಯನ್ನು ಕಲೆಹಾಕುತ್ತಿದ್ದಾರೆ. ಇತ್ತ ಮಾಡಿದ ತಪ್ಪನ್ನು ಪ್ರಶ್ನೆ ಮಾಡಿದ್ದಕ್ಕೆ ರೋಹಿದ್ ಕುಟುಂಬ ಇವತ್ತು ಅನಾಥವಾಗಿ ಕಣ್ಣೀರು ಹಾಕುವಂತಾಗಿದೆ.