ನಾವು ಆಡಿ ಬೆಳೆದ ಊರು, ಹುಟ್ಟಿದ ಮನೆ, ತಂದೆ-ತಾಯಿ ಮೊದ ಮೊದಲು ಖರೀದಿ ಮಾಡಿದ ವಸ್ತು ಹಾಗೂ ಇಷ್ಟಪಟ್ಟವರಿಂದ ಸಿಗುವ ಗಿಫ್ಟ್ ಹೀಗೆ ಪ್ರತಿಯೊಂದು ವಸ್ತುಗಳ ಮೇಲೆ ವಿಶೇಷ ವ್ಯಾಮೋಹ ಇರುತ್ತೆ.
ಇದೇ ರೀತಿ ಇಲ್ಲೊಬ್ಬ ತನ್ನ ಪ್ರೀತಿಯ ಕಾರಿನ ನೆನಪನ್ನು ಶಾಶ್ವತವಾಗಿ ಇರಿಸಲು ಕಾರನ್ನ ಸಮಾಧಿ ಮಾಡಿದ್ದಾನೆ. ಕುಟುಂಬ ಸಮೇತ ಕಾರಿಗೆ ಭಾವುಕ ವಿದಾಯ ಹೇಳಿ ಊರಿನವರಿಗೆ ಹಾಗೂ ಸಂಬಂಧಿಕರಿಗೆ ಭರ್ಜರಿ ಊಟ ಸಹ ಹಾಕಿಸಿದ್ದಾರೆ.
ಗುಜರಾತಿನ ಲಾಠಿ ತಾಲೂಕಿನ ಪದೋಶಿಂಗ ಗ್ರಾಮದಲ್ಲಿ ಈ ಅಪರೂಪದ ಘಟನೆ ನಡೆದಿದೆ. ಪದೋಶಿಂಗ ಗ್ರಾಮದ ಸಂಜಯ್ ಭಾಯ್ ಕಲುಭಾಯಿ ಪೊಲ್ರಾ ತನ್ನ ಭಾರವಾದ ಹೃದಯದಿಂದಲೇ ತನ್ನ ಪ್ರೀತಿಯ ಕಾರನ್ನು ಸಮಾಧಿ ಮಾಡಿದ್ದಾನೆ. ಕುಟುಂಬ ಸಮೇತ ಕಾರಿಗೆ ಭಾವುಕ ವಿದಾಯ ಹೇಳಲಾಗಿದೆ.
18 ವರ್ಷದ ಬಳಿಕ ವ್ಯಾಗ್ನರ್ ಕಾರು ಓಡಿಸಲಾಗದ ಹಂತಕ್ಕೆ ತಲುಪಿತ್ತು. ಕೊನೆ ಬಾರಿ ಕಾರಿನಲ್ಲಿ ಪ್ರಯಾಣಿಸಿದ ಮನೆಯವರು ಪ್ರೀತಿಯ ಕಾರಿನ ನೆನಪನ್ನ ಶಾಶ್ವತವಾಗಿ ಇರಿಸಲು ಈ ತೀರ್ಮಾನ ಮಾಡಿದ್ದಾರೆ.
ಜೆಸಿಬಿ ಮೂಲಕ ಹಳ್ಳವನ್ನು ತೋಡಿ ಕಾರನ್ನು ಸಮಾಧಿ ಮಾಡಲಾಯಿತು. ಬಳಿಕ ಕಾರಿನ ಸಮಾಧಿ ಸುತ್ತ ಗಿಡಗಳನ್ನು ನೆಡಲಾಯಿತು.
ರಾತ್ರಿ ಕಾರ್ಯಕ್ರಮದಲ್ಲಿ ಭಜನಾ ಸಾಂತ್ವಾನಿ ಕಾರ್ಯಕ್ರಮ ಸಹ ಹಮ್ಮಿಕೊಳ್ಳಲಾಯಿತು. ಈ ಭಜನಾ ಸಾಂತ್ವಾನಿ ಕಾರ್ಯಕ್ರಮದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಸನ್ಯಾಸಿಗಳು, ಸಂತರು, ಮಹಾಂತರು ಉಪಸ್ಥಿತರಿದ್ದರು.
ಪೊಲ್ರಾ ಕುಟುಂಬ ತಮ್ಮ ಪ್ರೀತಿಯ ಕಾರಿಗೆ ವಿದಾಯ ಹೇಳಿದ ಭಾವುಕ ಕ್ಷಣಕ್ಕೆ ಇಡೀ ಊರೇ ಸಾಕ್ಷಿಯಾಗಿದೆ. ಕರ್ಕಳದ ಚಿತಾಗಾರದಲ್ಲಿ ಪೂಜಾ ವಿಧಿವಿಧಾನ ನೆರವೇರಲಿದೆ.
ಸಂತರು ಮತ್ತು ಮಹಂತರಿಂದ ಸಮಯ ಸ್ಮರಣೆ ನಡೆಯಲಿದೆ. ಬಳಿಕ ಸಮಾಧಿ ಸ್ಥಳಕ್ಕೆ ಕಾರು ಹೊರಡಲಿದ್ದು, ಅಂತಿಮ ಸಂಸ್ಕಾರ ನಡೆಯಲಿದೆ.
ಇದೇ ಸಂದರ್ಭದಲ್ಲಿ ಸಂಜೆ ಊಟದ ವ್ಯವಸ್ಥೆ ಮಾಡಲಾಗಿದೆ ಎಂದು ಆಹ್ವಾನ ಪತ್ರಿಕೆಯಲ್ಲಿ ಬರೆಯಲಾಗಿತ್ತು. ಇನ್ನು ಅಂತ್ಯ ಸಂಸ್ಕಾರಕ್ಕೆ ಬಂದವರಿಗೆ ಪೂರಿ, ಚಪಾತಿ, ಸಬ್ಜಿ ಮತ್ತು ಲಾಡುಗಳನ್ನು ಬಡಿಸಲಾಯಿತು.