ವಿಟ್ಲ: ಮನೆ ಅಡಿಸ್ಥಳದ ಹಕ್ಕು ಪತ್ರ ಪಡೆಯುವ ವಿಚಾರದಲ್ಲಿ ಕಂದಾಯ ನಿರೀಕ್ಷಕರ ಕಛೇರಿಯಲ್ಲಿ ರಾಜಕೀಯ ಬೆಂಬಲಿಗರಿಂದ ದಾಂಧಲೆ ನಡೆದಿದ್ದು, ಮೇಜಿನ ಗಾಜು ಪುಡಿಯಾಗಿದೆ. ಪರಿಸ್ಥಿತಿ ವಿಕೋಪಕ್ಕೆ ಹೋಗುತ್ತಿದ್ದಂತೆ ಪೊಲೀಸರು ಸ್ಥಳಕ್ಕಾಗಮಿಸಿ ಬಂದೋಬಸ್ತು ಕಲ್ಪಿಸಿದ್ದಾರೆ.
ವೀರಕಂಬ ನಿವಾಸಿ ಶೇಖ್ ಶಿಬಾನ್ ಎಂಬರು ಇತ್ತೀಚೆಗೆ ಸರ್ಕಾರಿ ಜಾಗದಲ್ಲಿ ನೂತನ ಮನೆ ನಿರ್ಮಾಣ ಮಾಡಿದ್ದರು. ಅಡಿಸ್ಥಳವನ್ನು ತಮ್ಮ ಹೆಸರಿಗೆ ಮಾಡಿಕೊಳ್ಳುವ ನಿಟ್ಟಿನಲ್ಲಿ ೯೪ಸಿ ಅಡಿಯಲ್ಲಿ ಅರ್ಜಿಯನ್ನು ಸಲ್ಲಿಸಿದ್ದರು. ಕಂದಾಯ ಅಧಿಕಾರಿಗಳು ಸ್ಥಳ ತನಿಖೆಯನ್ನು ನಡೆಸಿ ವರದಿ ಸಲ್ಲಿಸುವ ಸಂದರ್ಭದಲ್ಲಿ ಮನೆ ಅರಣ್ಯ ಇಲಾಖೆಯಿಂದ ನಿರ್ಧಿಷ್ಟ ದೂರದಲ್ಲಿದ್ದು, ಅಲ್ಲಿಂದ ಒಪ್ಪಿಗೆ ಪಡೆಯುವ ಬಗ್ಗೆ ಷರಾ ಬರೆದಿದ್ದಾರೆ. ಇದರಿಂದ ಜಾಗ ಮಂಜೂರಾತಿ ಕಷ್ಟವಿದ್ದು, ಅದನ್ನು ತೆಗೆಯಬೇಕೆಂದು ಇಲಾಖೆಗೆ ಒತ್ತಡ ಹಾಕುವ ಕಾರ್ಯವಾಗಿತ್ತು.
ಬಿಜೆಪಿ ಮುಖಂಡರೋರ್ವರು ಬೆಂಬಲಿಗರ ಜತೆಗೆ ವಿಟ್ಲದ ಅರ್ ಐ ಕಛೇರಿಗೆ ಆಗಮಿಸಿದರು. ಮಾತಿನ ಮಧ್ಯೆ ಆಕ್ರೋಶಿತ ವ್ಯಕ್ತಿ ಸರ್ಕಾರಿ ಅಧಿಕಾರಿಯನ್ನು ನಿಂದಿಸಿ ಮೇಜಿಗೆ ಕೈಯನ್ನು ಬಡಿದು ದಾಂಧಲೆ ನಡೆಸಿದ್ದಾನೆ. ಈ ವೇಳೆ ಮೇಜಿನ ಮೇಲೆ ಹಾಸಲಾಗಿದ್ದ ಗಾಜು ಪುಡಿ ಪುಡಿಯಾಗಿದೆ. ಇದರಿಂದ ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದೆ.
ಪರಿಸ್ಥಿತಿ ವಿಕೋಪಕ್ಕೆ ಹೋಗಿರುವ ಮಾಹಿತಿ ಪಡೆದ ವಿಟ್ಲ ಪೊಲೀಸರು ಸ್ಥಳಕ್ಕೆ ಆಗಮಿಸಿ ಸೇರಿದ ಗುಂಪನ್ನು ಚದುರಿಸಿದ್ದಾರೆ. ನಾಕಬಂದಿ ರಚಿಸಿ ಯಾರೂ ಅರ್ ಐ ಕಛೇರಿಯನ್ನು ಪ್ರವೇಶಿಸದಂತೆ ಬಂದೋಬಸ್ತು ಕೈಗೊಂಡಿದ್ದಾರೆ.