ಸಂಡೂರು (ಬಳ್ಳಾರಿ): ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ವೈ. ವಿಜಯೇಂದ್ರ ಅವರನ್ನು ಉದ್ದೇಶಿಸಿ “ಅಂಬೆಗಾಲಿಡುವ ಕೂಸು” ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ನೀಡಿದ್ದ ಹೇಳಿಕೆಗೆ ವಿಧಾನ ಪರಿಷತ್ ಸದಸ್ಯ ಕಿಶೋರ್ ಕುಮಾರ್ ಪುತ್ತೂರು ಖಡಕ್ ತಿರುಗೇಟು ನೀಡಿದ್ದಾರೆ. “ಶ್ರೀ ಕೃಷ್ಣ ಪರಮಾತ್ಮ ಅಂಬೆಗಾಲಿಡುವಾಗಲೇ ಅಸುರೀ ಶಕ್ತಿಗಳನ್ನು ನಾಶಪಡಿಸಿರುವುದನ್ನ ಸಿದ್ದರಾಮಯ್ಯನವರು ನೆನಪಿಸಿಕೊಳ್ಳಲಿ” ಎಂದು ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ್ದಾರೆ.
ಸಂಡೂರಿನಲ್ಲಿ ಮಾತನಾಡಿದ ಅವರು, ತಮ್ಮ ಪಕ್ಷದ ರಾಜ್ಯಾಧ್ಯಕ್ಷರ ಕುರಿತು ಸಿಎಂ ನೀಡಿದ ಹೇಳಿಕೆಯನ್ನು ಭಾರೀ ತರಾಟೆಗೆ ತೆಗೆದುಕೊಂಡರು.ವಿಜಯೇಂದ್ರನನ್ನು ಶ್ರೀಕೃಷ್ಣನಿಗೆ ಹೋಲಿಸಿ ಮಾತನಾಡಿದ ವಿಧಾನ ಪರಿಷತ್ ಸದಸ್ಯರು, ಸಿದ್ದರಾಮಯ್ಯನವರ ಮನೋಸ್ಥಿತಿಯನ್ನು ಕಂಸನಿಗೆ ಹೋಲಿಸಿದರು.
ಹಗರಣ, ಮತಾಂಧ ಶಕ್ತಿಗಳ ಓಲೈಕೆಯ ಮೂಲಕ ರಾಜ್ಯದ ಜನತೆಯ ರಕ್ತ ಹೀರುತ್ತಿರುವ ಸಿದ್ದರಾಮಯ್ಯ ಅವರ ನೇತೃತ್ವದ ಕಾಂಗ್ರೆಸ್ ಸರಕಾರದ ರಾಕ್ಷಸಿ ಮನೋಭಾವವನ್ನು ನಿಯಂತ್ರಿಸಲು ಶ್ರೀಕೃಷ್ಣನ ಚಿಂತನೆಗಳ ಅಗತ್ಯವಿದೆ. ಬಿಜೆಪಿ ರಾಜ್ಯಾಧ್ಯಕ್ಷರನ್ನು ಅಂಬೆಗಾಲಿಡುವ ಕೂಸು ಎಂದಿರುವ ಸಿದ್ದರಾಮಯ್ಯ ಅವರು ಶ್ರೀಕೃಷ್ಣನ ಬಾಲ್ಯದಲ್ಲಿ ಪೂತನಿ, ಶಕಟಾಸುರ, ತೃಣಾವರ್ತರಂತಹ ಅಸುರೀ ಶಕ್ತಿಗಳನ್ನು ಅಂಬೆಗಾಲಿಡುತ್ತಲೇ ದಮನಿಸಿರುವುದನ್ನು ಮರೆಯಬಾರದು. ರಾಜ್ಯದಲ್ಲಿ ಕಾಂಗ್ರೆಸ್ ನಡೆಸುವ ದುಷ್ಕೃತ್ಯಗಳನ್ನು ನಿಯಂತ್ರಿಸಲು ಅಂಬೆಗಾಲಿಡುವ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ ಸೂಕ್ತ ವ್ಯಕ್ತಿ ಎಂದು ತಿಳಿಸಿದ್ದಾರೆ.
“ಮತಾಂಧರ ಮತ ಬ್ಯಾಂಕ್ ರಾಜಕೀಯಕ್ಕೆ ಹಿಂದೂ ಸಮಾಜದ ಮೇಲೆ ರಾಕ್ಷಸರಂತೆ ಎರಗುವ ಕಾಂಗ್ರೆಸ್ಸಿನ ವಿರುದ್ಧ ಇಡೀ ಸಮಾಜ ಒಗ್ಗಟ್ಟಿನಿಂದ ನಿಲ್ಲಲಿದೆ. ಹಿಂದೂ ಸಮಾಜದ ಭೂಮಿಯನ್ನು ವಕ್ಫ್ ಬೋರ್ಡಿಗೆ ಹಂಚುತ್ತಿರುವ ಕಾಂಗ್ರೆಸ್ ಸರಕಾರದ ಅವನತಿಗೆ ಬಿಜೆಪಿ ರಾಜ್ಯಾಧ್ಯಕ್ಷರ ನೇತೃತ್ವದಲ್ಲಿ ನಾವೆಲ್ಲರೂ ಯಾವುದೇ ರೀತಿಯ ಹೋರಾಟಕ್ಕೂ ಸಿದ್ಧ” ಎಂದು ಗುಡುಗಿದ್ದಾರೆ.
ಹಿಂದೂ ವಿರೋಧಿ ನೀತಿ ಅನುಸರಿಸುವವರು ರಾಕ್ಷಸರಿಗೆ ಸಮಾನ. ಶ್ರೀಕೃಷ್ಣನ ಬಾಲಲೀಲೆಯಲ್ಲಿ ಅಸುರರ ಸಂಹಾರವೂ ಸೇರಿದೆ. ಜನರಿಗೆ ತೊಂದರೆ ನೀಡುತ್ತಿದ್ದ ತನ್ನ ಸ್ವಂತ ಮಾವ ಕಂಸನನ್ನೇ ಶ್ರೀಕೃಷ್ಣ ವಧಿಸಿದ್ದಾನೆ. ಕಂಸನ ಧೋರಣೆಯ ಆಡಳಿತವಿಂದು ರಾಜ್ಯದಲ್ಲಿದೆ. ಅಂತಹ ದುರಾಡಳಿತದ ಸಂಹಾರವನ್ನು ಮತದಾರರು ಮಾಡಬೇಕಿದೆ. ಹೀಗಾಗಿ ವಿಜಯೇಂದ್ರ ಅವರನ್ನು ಶ್ರೀಕೃಷ್ಣನಾಗಿಯೂ, ಸಿದ್ದರಾಮಯ್ಯನವರನ್ನ ಕಂಸದ ರೂಪದಲ್ಲಿ ಕಾಣಬೇಕಿದ್ದು, ಮತದಾನದ ಮೂಲಕ ಈ ಎಲ್ಲ ದುರಾಡಳಿತಗಳಿಗೆ ಕೊನೆ ಹಾಡಲು ಭಾರತೀಯ ಜನತಾ ಪಕ್ಷಕ್ಕೆ ಶಕ್ತಿ ತುಂಬುವಂತೆ ಕಿಶೋರ್ ಕುಮಾರ್ ಪುತ್ತೂರು ಕರೆ ನೀಡಿದರು.