ಮಂಗಳೂರು: ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ತೆರಳುವ ಮರವೂರು ಸೇತುವೆ ಮಂಗಳವಾರ (ಇಂದು) ಮುಂಜಾನೆ ಸುಮಾರು ಮೂರು ಗಂಟೆಗೆ ಕುಸಿತಗೊಂಡಿದ್ದು, ಸಂಚಾರ ನಿರ್ಬಂಧಿಸಲಾಗಿದೆ. ಮಂಗಳೂರು-ಬಜಪೆ-ಕಟೀಲು ಸಂಪರ್ಕ ರಸ್ತೆ ಇದಾಗಿದ್ದು, ಪಲ್ಗುಣಿ ನದಿಗೆ ಅಡ್ಡವಾಗಿ ನಿರ್ಮಿಸಲಾಗಿದೆ.
ಬಜಪೆಯಿಂದ ಮಂಗಳೂರು ಕಡೆಗೆ ಬರುವಾಗ ಸೇತುವೆಯ ಮೊದಲ ಅಂಕಣ ಸುಮಾರು ಮೂರು ಅಡಿ ಕೆಳಗೆ ಕುಸಿದು ನಿಂತಿದೆ. ಕರಾವಳಿಯಲ್ಲಿ ಮೂರು ದಿನದಿಂದ ನಿರಂತರವಾಗಿ ಮಳೆ ಸುರಿಯುತ್ತಿದ್ದು, ಮೇಲಿನ ಡ್ಯಾಮ್‌ನಿಂದ ಒಂದೇ ಮಗ್ಗುಲಲ್ಲಿ ನೀರು ಹರಿದು ಬರುತ್ತಿತ್ತು.
ಪ್ರಮುಖ ರಸ್ತೆ!
ಮಂಗಳೂರು ನಗರದಿಂದ ವಿಮಾನ ನಿಲ್ದಾಣ ಬಜಪೆ, ಕಿನ್ನಿಗೋಳಿ, ಕಟೀಲು, ನೆಲ್ಲಿತೀರ್ಥ, ಅದ್ಯಪಾಡಿಗೆ ತೆರಳುವ ಪ್ರಮುಖ ರಸ್ತೆ ಇದಾಗಿದೆ.
ಪಿಲ್ಲರಿಗೆ ಹಾನಿ!
ಹಲವು ವರ್ಷಗಳಿಂದ ಕರಾವಳಿ ಭಾಗದಲ್ಲಿ ನಡೆಯುತ್ತಿರುವ ಮರಳು ಗಾರಿಕೆ ದಂಧೆಯೇ ಸೇತುವೆ ಕುಸಿತಕ್ಕೆ ಕಾರಣವೆನ್ನಲಾಗುತ್ತಿದೆ. ಸೇತುವೆ ಕೆಳಭಾಗದಲ್ಲೇ ಮರಳು ತೆಗೆಯುತ್ತಿದ್ದ ಕಾರಣ ಪಿಲ್ಲರುಗಳು ದುರ್ಬಲವಾಗಿ ಮೂಲರಪಟ್ನ ಸೇತುವೆ ಕುಸಿದು ಬಿದ್ದಿತ್ತು. ಈಗ ಅದೇ ಸರದಿ ಮರವೂರು ಸೇತುವೆಯದ್ದಾಗಿದೆ. ಸ್ಥಳಕ್ಕೆ ಕಾವೂರು-ಬಜಪೆ ಪೊಲೀಸರು ತೆರಳಿದ್ದು, ಈ ರಸ್ತೆಯಲ್ಲಿ ಜನಸಂಚಾರ-ವಾಹನ ಸಂಚಾರ ಸಂಪೂರ್ಣ ನಿಷೇಧಿಸಲಾಗಿದೆ.