ಮಂಗಳೂರು : ದೈತ್ಯಾಕಾರದ ಮರದ ಕೊಂಬೆಯೊಂದು ಮುರಿದು ಬಿದ್ದ ಪರಿಣಾಮ ಮೂವರು ವಿದ್ಯಾರ್ಥಿನಿಯರು ಗಾಯಗೊಂಡು ಆಸ್ಪತ್ರೆಗೆ ದಾಖಲಾದ ಘಟನೆ ಮಂಗಳೂರಿನ ನಗರದ ಹಂಪನಕಟ್ಟೆ ಜಂಕ್ಷನ್ ಬಳಿಯ ಶೆಟ್ಟಿ ಆಟೋ ಪಾರ್ಕ್ ಬಳಿ ನಿನ್ನೆ (ಮಾ.17) ಸಂಜೆ ನಡೆದಿದೆ.
ಮಲ್ಲೂರು ಉದ್ದಬೆಟ್ಟು ನಿವಾಸಿಗಳಾದ ಮರಿಯಂ ಮುಫೀದಾ (18), ಫಾಹಿಮಾ ಮರಿಯಂ (17) ಹಾಗೂ ಅಬ್ಬೆಟ್ಟು ನಿವಾಸಿ ಅಫ್ರತ್ (18) ಗಾಯಾಳುಗಳು ಎಮದು ಗುರುತಿಸಲಾಗಿದೆ. ಈ ಪೈಕಿ ಅಫ್ರತ್‌ಗೆ ಹೆಚ್ಚು ಗಾಯವಾಗಿದೆ.
ನಿನ್ನೆ ಸಂಜೆ ಸುಮಾರು 4:30ಕ್ಕೆ ಕಾಲೇಜು ಮುಗಿಸಿ ಮನೆಗೆ ತೆರಳಲು ಹಂಪನಕಟ್ಟೆಯ ಬಳಿ ಬಸ್ಸಿಗೆ ಕಾಯುತ್ತಿದ್ದಾಗ ಮರದ ಕೊಂಬೆ ಬಿದ್ದಿದೆ. ಘಟನೆ ಸಂಭವಿಸಿದ ಪ್ರದೆಶವು ಅತೀ ಹೆಚ್ಚು ಜನರು ಓಡಾಡುವ ಪ್ರದೇಶವಾಗಿದ್ದು ಬಹುತೇಕ ಮಂದಿ ಅಪಾಯದಿಂದ ಪಾರಾಗಿದ್ದಾರೆ.
ಶಾಸಕ ವೇದವ್ಯಾಸ ಕಾಮತ್ ವಿಷಯ ತಿಳಿದ ಕೂಡಲೇ ಪಾಲಿಕೆಯ ಮಾಜಿ ಸದಸ್ಯೆ ಪೂರ್ಣಿಮಾರನ್ನು ಸ್ಥಳಕ್ಕೆ ಭೇಟಿ ನೀಡುವಂತೆ ಮತ್ತು ಜಿಲ್ಲಾಧಿಕಾರಿ ಹಾಗೂ ನಗರ ಪಾಲಿಕೆ ಆಯುಕ್ತರಿಗೆ ಕರೆ ಮಾಡಿ ಗಾಯಾಳುಗಳ ಚಿಕಿತ್ಸಾ ವೆಚ್ಚ ಸಹಿತ ಕೊಂಬೆಯ ತೆರವಿಗೆ ಕೂಡಲೇ ಕ್ರಮ ಕೈಗೊಳ್ಳುವಂತೆ ಸೂಚಿಸಿದ್ದಾರೆ.
ಪ್ರಸ್ತುತ ಗಾಯಾಳುಗಳನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಘಟನೆಯಲ್ಲಿ ಇನ್ನೂ ಕೆಲವರಿಗೆ ಗಾಯವಾಗಿದ್ದು, ಅವರನ್ನು ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಮರದ ಕೊಂಬೆ ಮುರಿದು ಬಿದ್ದ ಬಗ್ಗೆ ಮಾಹಿತಿ ಪಡೆದ ಪಾಂಡೇಶ್ವರ ಅಗ್ನಿಶಾಮಕ ದಳದ ಸಿಬ್ಬಂದಿ ವರ್ಗವು ತಕ್ಷಣವೇ ಸ್ಥಳಕ್ಕಾಗಮಿಸಿ ಮರದ ಕೊಂಬೆಗಳನ್ನು ತೆರವುಗೊಳಿಸಿತು.