ಕೊರೊನಾ ಸೋಂಕು ಉಲ್ಬಣಗೊಂಡ ಹಿನ್ನೆಲೆ ಅರ್ಧಕ್ಕೇ ತೆರೆ ಎಳೆಯಲಾಗಿದ್ದ ಬಿಗ್ಬಾಸ್ ಸೀಸನ್ 8 ಸೆಂಕೆಂಡ್ ಇನ್ನಿಂಗ್ಸ್ ಪ್ರಾರಂಭವಾಗಲಿದೆ ಅನ್ನೋ ಮಾಹಿತಿ ಲಭ್ಯವಾಗಿದೆ.
ಇದೇ ಬುಧವಾರ ಜೂನ್ 23 ರಿಂದ ಬಿಗ್ ಬಾಸ್ ಸೆಕೆಂಡ್ ಇನ್ನಿಂಗ್ಸ್ ಆರಂಭವಾಗಲಿದ್ದು, ಈ ಬಾರಿ ಆಟಗಳು ಹೇಗೆ ಇರುತ್ತೆ ಅನ್ನೋದು ತೀವ್ರ ಕುತೂಹಲಕ್ಕೆ ಕಾರಣವಾಗಿದೆ. ಯಾಕಂದ್ರೆ ಬಿಗ್ ಬಾಸ್ ಮನೆಯಿಂದ ಆಚೆ ಬಂದಿರೋ ಸ್ಪರ್ಧಿಗಳು ಈಗಾಗಲೇ ಸಾಕಷ್ಟು ಇಂಟರ್ವ್ಯೂಗಳನ್ನ ನೀಡಿದ್ದಾರೆ.. ಒಬ್ಬರೊಬ್ಬರು ಹೇಗೆ ಬೆನ್ನ ಹಿಂದೆ ಏನು ಮಾಡ್ತಿದ್ದರು ಅನ್ನೋದನ್ನೂ ಈಗ ತಿಳಿದಿದ್ದಾರೆ. ಹೀಗಾಗಿ, ಅಂದಿನ ಸ್ನೇಹಿತರು ಈಗಲೂ ಸ್ನೇಹಿತರಾಗಿಯೇ ಇರ್ತಾರಾ? ಅಥವಾ ವಿರೋಧಿಗಳು ಆಪ್ತಮಿತ್ರರಾಗ್ತಾರಾ? ಈ ಸ್ನೇಹ ಮತ್ತು ವಿರೋಧವನ್ನ ಬಿಗ್ಬಾಸ್ ಹೇಗೆ ನಿರ್ವಹಣೆ ಮಾಡ್ತಾರೆ ಅನ್ನೋದು ಸದ್ಯದ ಕುತೂಹಲ.
ಇನ್ನು ಇತ್ತೀಚೆಗೆ ತಾನೆ ಫೇಸ್ಬುಕ್ನಲ್ಲಿ ಪೋಸ್ಟ್ ಹಾಗಿದ್ದ ಕಲರ್ಸ್ ಕನ್ನಡ ವಾಹಿನಿ ಮುಖ್ಯಸ್ಥ ಪರಮೇಶ್ವರ್ ಗುಂಡ್ಕಲ್,
ಊರು ಸೇರಿದಾಗಲೇ ದಾರಿ ಮುಗಿಯುವುದು. ಮನೆ ಸೇರಿದಾಗಲೇ ಹಾದಿಯಲ್ಲಿ ಕಷ್ಟಪಟ್ಟಿದ್ದು ಸಾರ್ಥಕ ಅನಿಸೋದು. ಅರ್ಧದಲ್ಲಿಯೇ ನಿಲ್ಲಿಸಿದ್ದ ಪ್ರಯಾಣವನ್ನು ಈಗ ಪುನಃ ಅದೇ ಹನ್ನೆರಡು ಜನರೊಂದಿಗೆ ಶುರು ಮಾಡುವ ಸಮಯ ಅಂತ ಸುಳಿವು ನೀಡಿದ್ರು. ಆದ್ರೆ ಡೇಟ್ ಮಾತ್ರ ಅನೌನ್ಸ್ ಮಾಡಿರಲಿಲ್ಲ.
ಅಲ್ಲದೇ ಇದೊಂಥರಾ ಎರಡನೇ ಇನಿಂಗ್ಸ್. ಯಾರು ಚೆನ್ನಾಗಿ ಆಡುತ್ತಿದ್ದಾರೆ, ಎಲ್ಲಿ ಚೆನ್ನಾಗಿ ಆಡಬಹುದಿತ್ತು, ಎಲ್ಲಿ ಚೆನ್ನಾಗಿ ಆಡಬೇಕಾಗಿತ್ತು, ಯಾರಿಗೆ ಗಾಯವಾಗಿದೆ, ಯಾರು ಬೇಗ ಸುಸ್ತಾಗುತ್ತಾರೆ, ಯಾರು ರೊಚ್ಚಿಗೇಳುತ್ತಾರೆ, ಪಿಚ್ ಹೇಗೆ ವರ್ತಿಸುತ್ತಿದೆ ಎನ್ನುವುದೆಲ್ಲಾ ಗೊತ್ತಿದೆ. ಮೊದಲನೇ ಇನಿಂಗ್ಸಿನ ಸ್ಕೋರ್ ಕಾರ್ಡ್ ಎಲ್ಲರಿಗೂ ಗೊತ್ತು. ಆದರೆ ಎರಡನೇ ಇನಿಂಗ್ಸಿನಲ್ಲಿ ಯಾರು ಹೇಗೆ ಆಡುತ್ತಾರೆ ಅನ್ನುವುದರ ಮೇಲೇ ಮ್ಯಾಚ್ ಯಾರು ಗೆಲ್ಲುತ್ತಾರೆ ಎಂಬ ತೀರ್ಮಾನ ಆಗುವುದು.. ಎರಡನೇ ಇನಿಂಗ್ಸಿನಲ್ಲಿ ಮತ್ತೆ ಮೊದಲ ರನ್ ಓಡಬೇಕು. ಮೊದಲ ವಿಕೆಟ್ ಉರುಳಿಸಬೇಕು. ಅದೇ ಏಕಾಗ್ರತೆ, ಶ್ರದ್ಧೆ ಮತ್ತು ಜೀವನಪ್ರೀತಿ ಬೇಕು. ಇಷ್ಟು ವರ್ಷಗಳ ಕಾಲ ಜಗತ್ತಿನ ಬೇರೆ ಬೇರೆ ದೇಶಗಳಲ್ಲಿ ನಡೆದ ಯಾವ ಬಿಗ್ ಬಾಸ್ ಶೋದಲ್ಲೂ ಎರಡನೇ ಇನಿಂಗ್ಸ್ ಆಡುವ ಅವಕಾಶ ಯಾರಿಗೂ ಸಿಕ್ಕಿರಲಿಲ್ಲ. ಕನ್ನಡದಲ್ಲಿ ಈ ಹನ್ನೆರಡು ಕಂಟೆಸ್ಟೆಂಟುಗಳಿಗೆ ಅಂಥದ್ದೊಂದು ಅವಕಾಶ ಸಿಗುತ್ತಿದೆ.
ಅಂತ ಕೂಡ ಅವರು ಹೇಳಿದ್ರು.