ಉಪ್ಪಿನಂಗಡಿ: ನೆಕ್ಕಿಲಾಡಿ ಗ್ರಾಮದ ಮರವುದಡ್ಕ ದರ್ಬೆ ನಿವಾಸಿ ಲಕ್ಷ್ಮಣ ನಾಯ್ಕ್ (55) ಎಂಬವರ ಮೃತದೇಹವು ಅವರ ಮನೆಯಲ್ಲಿ ನೇಣು ಬಿಗಿದು ಆತ್ಮಹತ್ಯೆ
ಮಾಡಿಕೊಂಡಿರುವ ಸ್ಥಿತಿಯಲ್ಲಿ ಜೂ.26 ರಂದು ಪತ್ತೆಯಾಗಿದೆ.
ಲಕ್ಷ್ಮಣ ನಾಯ್ಕ್ ರವರ ಮೃತದೇಹ ಮನೆಯ
ಕೊಠಡಿಯಲ್ಲಿ ನೇಣು ಬಿಗಿದುಕೊಂಡ, ಸ್ಥಿತಿಯಲ್ಲಿ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದ್ದು, 3 ದಿನಗಳ ಹಿಂದೆ ಮೃತಪಟ್ಟಿರುವ
ಸಾಧ್ಯತೆ ಬಗ್ಗೆ ಉಪ್ಪಿನಂಗಡಿ ಪೊಲೀಸರು ತಿಳಿಸಿದ್ದಾರೆ.
ಲಕ್ಷ್ಮಣ ನಾಯ್ಕ್ ನೆಕ್ಕಿಲಾಡಿಯಲ್ಲಿರುವ ಖಾಸಗಿ ಪ್ಲಾಸ್ಟಿಕ್ ಫ್ಯಾಕ್ಟರಿಯೊಂದರ ಮಾಲಕರ ತೋಟದಲ್ಲಿ ಕೃಷಿ ಕಾರ್ಮಿಕನಾಗಿ ಕಳೆದ 15 ವರ್ಷಗಳಿಂದ ಕೆಲಸ ಮಾಡುತ್ತಿದ್ದರೆನ್ನಲಾಗಿದ್ದು, 3 ದಿನಗಳಿಂದ ಅಲ್ಲಿಗೆ ಕೆಲಸಕ್ಕೆ ಹೋಗಿರಲಿಲ್ಲವೆನ್ನಲಾಗಿದೆ.
8 ವರ್ಷದಿಂದ ಒಂಟಿಯಾಗಿದ್ದ ಲಕ್ಷ್ಮಣ ನಾಯ್ಕ್:
ವಿಪರೀತ ಕುಡಿತದ ಚಟ ಹೊಂದಿರುವ ಲಕ್ಷ್ಮಣ ನಾಯ್ಕ್ ಪ್ರತಿನಿತ್ಯ ಮನೆಯಲ್ಲಿ ಹೆಂಡತಿ ಮಕ್ಕಳೊಂದಿಗೆ ಜಗಳವಾಡಿಕೊಂಡಿದ್ದು, ಕಳೆದ 8 ವರ್ಷದ ಹಿಂದೆ ಪತ್ನಿ ಮತ್ತು ಮೂವರು ಮಕ್ಕಳು ಇವರಿಂದ ದೂರವಾಗಿ ಕುಟುಂಬದ ಮನೆಯಲ್ಲಿ ವಾಸವಾಗಿರುತ್ತಾರೆ. ಹೀಗಾಗಿ ಈ ಮನೆಗೂ ಪತ್ನಿ ಮಕ್ಕಳಿದ್ದ ಮನೆಯ ಮಧ್ಯೆ ಯಾವುದೇ ಸಂಪರ್ಕ ಇರಲಿಲ್ಲ
ಲಕ್ಷ್ಮಣ ನಾಯ್ಕ್ ತನ್ನ ಮನೆಯಲ್ಲಿ ಏಕಾಂಗಿಯಾಗಿ ಜೀವನ ನಡೆಸುತ್ತಿದ್ದು, ಇವರ ಮನೆಯ ಕಡೆಯಿಂದ ವಾಸನೆ ಬರುವುದನ್ನು ಗಮನಿಸಿ ಮನೆಯ ಕಿಟಕಿ ಬಳಿ ನೋಡಿದಾಗ ನೇಣು ಬಿಗಿದ ಸ್ಥಿತಿಯಲ್ಲಿ ಮೃತದೇಹ ಕಂಡು ಬಂದಿದೆ ಎಂದು ಲಕ್ಷ್ಮಣ ನಾಯ್ಕ್ ರವರ ತಮ್ಮ ಸುಂದರ ನಾಯ್ಕ್ ತಿಳಿಸಿದ್ದಾರೆ.
ಮೃತ ಲಕ್ಷ್ಮಣ ನಾಯ್ಕ್ ರವರ ಪತ್ನಿ ಅರುಣಾ, ಪುತ್ರರಾದ ತ್ರಿವಿಕ್ರಮ, ತೀರ್ಥೇಶ, ವರ್ಷಿತ್‌ರನ್ನು ಅಗಲಿದ್ದಾರೆ.
ಘಟನಾ ಸ್ಥಳಕ್ಕೆ ಉಪ್ಪಿನಂಗಡಿ ಎ.ಎಸ್.ಐ.ಗಳಾದ ವಿಜಯೇಂದ್ರ, ಶೀನಪ್ಪ ಗೌಡ, ಪ್ರೊಬೇಷನರಿ ಎಸ್.ಐ. ಅನಿಲ್ ಕುಮಾರ್ ಭೇಟಿ ನೀಡಿ ಪರಿಶೀಲನೆ ನಡೆಸಿ,
ಪ್ರಕರಣ ದಾಖಲಿಸಿದ್ದಾರೆ.