ಪುತ್ತೂರು: ಉದಯೋನ್ಮುಖ ಗಾಯಕಿ ಶ್ರೀರಕ್ಷಾ ಎಸ್. ಎಚ್. ಪೂಜಾರಿ ಅವರ ಸಿರಿಕಂಠದಲ್ಲಿ ಮೂಡಿ ಬಂದಿರುವ, ಸುಧಾಕರ ಸುವರ್ಣ ತಿಂಗಳಾಡಿ ಅವರು ಬರೆದ ಗೆಜ್ಜೆಗಿರಿ ನಂದನಾಮೃತ ಎಂಬ ಕನ್ನಡ ಭಕ್ತಿಗಾನಾಮೃತವನ್ನು ಮಾಚ್೯ ಒಂದರಂದು ಗೆಜ್ಜೆಗಿರಿ ನಂದನ ಬಿತ್ತ್ ಲ್ ಕ್ಷೇತ್ರದ ವಾರ್ಷಿಕ ಜಾತ್ರಾ ಮಹೋತ್ಸವದ ಸಂದರ್ಭದಲ್ಲಿ ಯುಟ್ಯೂಬ್ ಚಾನೆಲ್ ಗೆ ಬಿಡುಗಡೆ ಮಾಡಲಾಯಿತು.ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದ ಕೋಶಾಧಿಕಾರಿ ಪದ್ಮರಾಜ್ ಆರ್. ಅವರು ದೇಯಿ ಬೈದ್ಯೆತಿ ಸತ್ಯಧರ್ಮ ಚಾವಡಿಯ ಮುಂಭಾಗದಲ್ಲಿ ನಡೆದ ಸರಳ ಸುಂದರ ಸಮಾರಂಭದಲ್ಲಿ ಹಾಡನ್ನು ಲೋಕಾರ್ಪಣೆ ಮಾಡಿದರು.
ಶ್ರೀರಕ್ಷಾ ಅವರಿಗೆ ಉತ್ತಮ ಭವಿಷ್ಯವಿದೆ. ಮೂಲಸ್ಥಾನದ ಹಾಡು ಮೂಲಸ್ಥಾನದಲ್ಲೇ ಬಿಡುಗಡೆಯಾಗುತ್ತಿರುವುದು ಸಂತೋಷದ ವಿಚಾರ ಎಂದವರು ನುಡಿದರು.ಗೆಜ್ಜೆಗಿರಿ ನಂದನಾಮೃತ ಭಕ್ತಿಗಾನಾಮೃತ ಯೋಜನೆಯ ಪ್ರಾಯೋಜಕರೂ, ಗೆಜ್ಜೆಗಿರಿ ಕ್ಷೇತ್ರದ ಅಧ್ಯಕ್ಷರೂ ಆದ ಜಯಂತ ನಡುಬೈಲ್ ಮಾತನಾಡಿ, ಎಳೆಯ ವಯಸ್ಸಿನಲ್ಲೇ ಶ್ರೀರಕ್ಷಾ ಎಸ್.ಎಚ್. ಪೂಜಾರಿ ಅವರು ಉತ್ತಮ ಪ್ರತಿಭೆ ಅಭಿವ್ಯಕ್ತಿಗೊಳಿಸುತ್ತಿದ್ದಾರೆ. ಹರೀಶ್ ಪೂಜಾರಿ ಕೊಣಾಜೆ ದಂಪತಿಗಳು ತಮ್ಮ ಪುತ್ರಿಯನ್ನು ಉತ್ತಮ ಹಾದಿಯಲ್ಲಿ ಮುನ್ನಡೆಸುತ್ತಿದ್ದಾರೆ ಎಂದರು.ರಾಷ್ಟ್ರೀಯ ಬಿಲ್ಲವರ ಮಹಾಮಂಡಲದ ಅಧ್ಯಕ್ಷರೂ, ಗೆಜ್ಜೆಗಿರಿ ಕ್ಷೇತ್ರದ ಉಪಾಧ್ಯಕ್ಷರೂ ಆದ ಡಾ. ರಾಜಶೇಖರ ಕೋಟ್ಯಾನ್, ಕ್ಷೇತ್ರದ ಅನುವಂಶೀಯ ಮುಕ್ತೆಸರಾರಾದ ಶ್ರೀಧರ ಪೂಜಾರಿ ಶುಭ ಹಾರೈಸಿದರು.
ಉದಯೋನ್ಮುಖ ಗಾಯಕಿ
ಶ್ರೀರಕ್ಷಾ ಅವರು ಈಗಾಗಲೇ ಹಲವಾರು ಹಾಡುಗಳಿಗೆ ತಾವೇ ಸ್ವರಕಲ್ಪನೆ ಮಾಡಿ, ಹಾಡಿದ್ದು, ಅವುಗಳೆಲ್ಲ ಶ್ರೀರಕ್ಷಾ ಎಸ್.ಎಚ್. ಪೂಜಾರಿ ಯೂಟ್ಯೂಬ್ ಚಾನೆಲ್ನಲ್ಲಿ ಲಭ್ಯವಿದೆ. ಬ್ರಹ್ಮಶ್ರೀ ನಾರಾಯಣಗುರುಗಳ ಸ್ತುತಿ, ಶಿವ ದೇವರ ಹಾಡು, ಕೃಷ್ಣನ ಹಾಡು ಇತ್ಯಾದಿಗಳು ಈಗಾಗಲೇ ಜನಪ್ರಿಯತೆ ಪಡೆದುಕೊಂಡಿವೆ. ಹರೀಶ್ ಪೂಜಾರಿ – ಸುರೇಖಾ ದಂಪತಿಗಳು ಮೂಲತಃ ಉಪ್ಪಿನಂಗಡಿ ಸಮೀಪದ ಇಳಂತಿಲ ಗ್ರಾಮದವರಾಗಿದ್ದು, ಪ್ರಸ್ತುತ ಕೊಣಾಜೆಯಲ್ಲಿ ನೆಲಸಿದ್ದಾರೆ. ತಮ್ಮ ಪುತ್ರಿಯ ಪ್ರತಿಭೆಯನ್ನು ಗುರುತಿಸಿ ಅದರ ಅನಾವರಣಕ್ಕೆ ಎಲ್ಲ ಪ್ರಯತ್ನಗಳನ್ನು ಮಾಡುತ್ತಿದ್ದಾರೆ. ಶ್ರೀರಕ್ಷಾ ಶಾಸ್ತ್ರೀಯ ಸಂಗೀತ ಅಭ್ಯಾಸ ಮಾಡಿದ್ದು, ಹಾಡುಗಳಿಗೆ ಸ್ವರಕಲ್ಪನೆ ಮಾಡುವ ಮೂಲಕ ಇನ್ನೊಂದು ಮಜಲು ಪ್ರವೇಶಿಸಿದ್ದಾರೆ. ಹಲವು ವೀಡಿಯೋಗಳಿಗೆ ಕಂಠದಾನ ಕಲಾವಿದೆಯಾಗಿಯೂ ಗುರುತಿಸಿಕೊಂಡಿದ್ದಾರೆ.
ಗೆಜ್ಜೆಗಿರಿ ಕುರಿತ ಸಾಹಿತ್ಯ ಸರಣಿಈ ಹಾಡು ಬರೆದ ಸುಧಾಕರ ಸುವರ್ಣ ತಿಂಗಳಾಡಿಯವರು 2016ರಲ್ಲಿ ಗೆಜ್ಜೆಗಿರಿ ಕ್ಷೇತ್ರದ ಮಹಿಮೆ ಸಾರುವ 7 ತುಳು ಗೀತೆಗಳನ್ನು ಬರೆದಿದ್ದು, ಅದು ಗೆಜ್ಜೆಗಿರಿ ನಂದನ ಎಂಬ ಧ್ವನಿಸುರಳಿಯಲ್ಲಿ ಬಿಡುಗಡೆಗೊಂಡಿತ್ತು. ಇದೀಗ ಅವರು ಗೆಜ್ಜೆಗಿರಿ ಮಹಿಮೆ ಸಾರುವ ಕನ್ನಡ ಹಾಡು ಬರೆದಿದ್ದಾರೆ. ಗೆಜ್ಜೆಗಿರಿ ಕ್ಷೇತ್ರದ ಸಮಗ್ರ ಇತಿಹಾಸ ಹಾಗೂ ಜನಪದೀಯ ತಿರುಳನ್ನು ಅಧ್ಯಯನ ಮಾಡಿರುವ ಇವರು “‘ಗೆಜ್ಜೆಗಿರಿಯ ಹೆಜ್ಜೆಗುರುತು’ ಪುಸ್ತಕ ಬರೆದಿದ್ದು, ಕಳೆದ ವರ್ಷ ನಡೆದ ಗೆಜ್ಜೆಗಿರಿ ಬ್ರಹ್ಮಕಲಶೋತ್ಸವ ಸಂದರ್ಭ ಬಿಡುಗಡೆಗೊಂಡಿತ್ತು. 5 ಶತಮಾನಗಳ ಕೋಟಿ ಚೆನ್ನಯರ ಇತಿಹಾಸದಲ್ಲಿ ಅವರ ಮೂಲಸ್ಥಾನವಾದ ಗೆಜ್ಜೆಗಿರಿಯನ್ನು ಕೇಂದ್ರೀಕರಿಸಿಕೊಂಡು ಅಧ್ಯಯನ ನಡೆಸಿ ಪ್ರಕಟಿಸಿದ ಮೊದಲ ಪುಸ್ತಕ ಎಂಬ ಕೀರ್ತಿಗೆ ಇದು ಭಾಜನವಾಗಿದೆ. ಕೋಟಿ ಚೆನ್ನಯರ ಮೂಲಸ್ಥಾನದ ಇತಿಹಾಸ ಆಧರಿಸಿ ಸುಧಾಕರ ಸುವರ್ಣ ಅವರು ಬರೆದ ಗೆಜ್ಜೆಗಿರಿತ ಬೊಲ್ಪು ಎಂಬ ತುಳು ರೂಪಕ ಕಳೆದ ವರ್ಷ ಕ್ಷೇತ್ರದ ಬ್ರಹ್ಮಕಲಶೋತ್ಸವ ಸಂದರ್ಭ ಪುತ್ತೂರಿನ ಮೂಕಾಂಬಿಕಾ ಕಲ್ಚರಲ್ ಅಕಾಡೆಮಿಯವರಿಂದ ಪ್ರಸ್ತುತಗೊಂಡಿತ್ತು.
ಗಣ್ಯರ ಉಪಸ್ಥಿತಿ
ಗಾನಾಮೃತ ಬಿಡುಗಡೆಯ ಸಂದರ್ಭದಲ್ಲಿ ಗಾಯಕಿ ಶ್ರೀರಕ್ಷಾ ಎಸ್. ಎಚ್. ಪೂಜಾರಿ, ಯೋಜನೆಯ ರೂವಾರಿ ಹರೀಶ್ ಪೂಜಾರಿ ಕೊಣಾಜೆ, ಕ್ಷೇತ್ರದ ಉಪಾಧ್ಯಕ್ಷರಾದ ಪೀತಾಂಬರ ಹೇರಾಜೆ, ಪ್ರಧಾನ ಕಾರ್ಯದರ್ಶಿ ರವಿ ಪೂಜಾರಿ ಚಿಲಿಂಬಿ, ಕೋಶಾಧಿಕಾರಿ ದೀಪಕ್ ಕೋಟ್ಯಾನ್, ಕಾರ್ಯದರ್ಶಿ ಉಲ್ಲಾಸ್ ಕೋಟ್ಯಾನ್, ಸಮಿತಿಯ ಪ್ರಮುಖರಾದ ಚಂದ್ರಶೇಖರ್ ಸುವರ್ಣ ಮೂಲ್ಕಿ, ಸಂಜೀವ ಪೂಜಾರಿ ಕುಚ್ಚಿಗುಡ್ಡೆ, ಸಂತೋಷ್ ಕುಮಾರ್, ಶೈಲೇಂದ್ರ ಸುವರ್ಣ, ನೇಮೋತ್ಸವ ಸಮಿತಿ ಅಧ್ಯಕ್ಷ ಸಂಜೀವ ಪೂಜಾರಿ ಕೂರೇಲು, ನೃತ್ಯಗುರು ವಿದೂಷಿ ರೇಶ್ಮಾ ನಿರ್ಮಲ್ ಭಟ್, ಸ್ನೇಹ ಬಳಗ ಮಸ್ಕತ್ ಇದರ ಶಿವಾನಂದ ಕೋಟ್ಯಾನ್, ಬೆಳ್ತಂಗಡಿ ಬಿಲ್ಲವ ಸಂಘದ ಉಪಾಧ್ಯಕ್ಷ ಮನೋಹರ ಕುಮಾರ್ ಇಳಂತಿಲ, ಪ್ರಮುಖರಾದ ಜಿನ್ನಪ್ಪ ಪೂಜಾರಿ ಆಟಾಲು ಉಪಸ್ಥಿತರಿದ್ದರು. ಪ್ರಮುಖರಾದ ರಾಜೇಂದ್ರ ಚಿಲಿಂಬಿ ಸ್ವಾಗತಿಸಿದರು. ಉಪನ್ಯಾಸಕರೂ, ಸಾಹಿತಿಗಳೂ ಆದ ಡಾ. ನವೀನ್ ಕುಮಾರ್ ಮರಿಕೆ ಕಾರ್ಯಕ್ರಮ ನಿರ್ವಹಿಸಿದರು. ಸುರೇಖಾ ಹರೀಶ್ ಪೂಜಾರಿ ವಂದಿಸಿದರು.