ವಿಟ್ಲ: ವಿಶ್ವ ಹಿಂದೂ ಪರಿಷದ್ ಭಜರಂಗದಳ, ವಿಷ್ಣುಮೂರ್ತಿ ಶಾಖೆ ಮಾಣಿಲ ಇದರ ಆಶ್ರಯದಲ್ಲಿ ವಿ.ಎಚ್.ಪಿ. ವೃತ್ತ ಕುಕ್ಕಾಜೆಯಲ್ಲಿ ಇತ್ತೀಚೆಗೆ ಸಾವನ್ನಪ್ಪಿದ ಕಾಸರಗೋಡಿನ ಜ್ಯೋತಿಷ್ ಕುಮಾರ್ ಹಾಗೂ ಹತ್ಯೆಯಾದ ಶಿವಮೊಗ್ಗದ ಹರ್ಷ ರವರಿಗೆ ನುಡಿನಮನ ಸಮರ್ಪಿಸಲಾಯಿತು.
ಈ ಸಂದರ್ಭದಲ್ಲಿ ಶ್ರೀ ಕ್ಷೇತ್ರ ಕುಕ್ಕಾಜೆಯ ಶ್ರೀಕೃಷ್ಣ ಗುರೂಜಿ ಅವರು ಹಿಂದೂ ಸಮಾಜದ ಒಗ್ಗಟ್ಟಿನ ಅವಶ್ಯಕತೆ ಮತ್ತು ಕಷ್ಟಕ್ಕೆ ಸ್ಪಂದಿಸುವ ಅಗತ್ಯದ ಬಗ್ಗೆ ತಿಳಿಸಿದರು.
ಶ್ರೀ ವಿಷ್ಣುಮೂರ್ತಿ ದೇವಸ್ಥಾನದ ಆಡಳಿತ ಮಂಡಳಿಯ ಅಧ್ಯಕ್ಷರಾದ ಗಣೇಶ ಕುಮಾರ್ ದೇಲಂತಮಜಲು ಮಾತನಾಡಿ, ನಮ್ಮನ್ನಗಲಿದ ಈ ಯುವ ಚೇತನಗಳ ನಿರ್ವಾತವನ್ನು ತುಂಬುವುದು ಅಷ್ಟು ಸುಲಭದ ಮಾತಲ್ಲ ಎಂಬುದಾಗಿ ವಿವರಿಸಿದರು.
ಅಕ್ಷಯ್ ರಜಪೂತ್ ಕಲ್ಲಡ್ಕ ರವರು ನುಡಿನಮನ ಸಲ್ಲಿಸಿ, ನಮ್ಮೊಳಗಿನ ಜಾತಿ ಭೇದವನ್ನು ಮರೆತು ಹಿಂದೂ ಸಮಾಜವೇ ಒಗ್ಗೂಡಿ ಇಂತಹ ಪರಿಸ್ಥಿತಿಯನ್ನು ಎದುರಿಸಬೇಕು ಎಂದರು.
ಈ ಸಂದರ್ಭದಲ್ಲಿ, ವಿಟ್ಲ ಪ್ರಖಂಡದ ಸಂಚಾಲಕರಾದ ಚಂದ್ರಹಾಸ ಕನ್ಯಾನ, ವಿಶ್ವ ಹಿಂದೂ ಪರಿಷದ್ ನ ಮಾಣಿಲದ ಅಧ್ಯಕ್ಷರಾದ ಉದಯ ನಾಯಕ್ ಪಕಳಕುಂಜ , ಭಜರಂಗದಳದ ಸಂಚಾಲಕರಾದ ಉದಯ ಶೆಟ್ಟಿ ಸಾಯ , ಎಸ್.ನಾರಾಯಣ ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.