ಪುತ್ತೂರು: ಮುಂಡೂರು ಗ್ರಾಮದ ಶ್ರೀ ಕುಕ್ಕಿನಡ್ಕ ಶ್ರೀ ಸುಬ್ರಾಯ ದೇವಸ್ಥಾನದಲ್ಲಿ ಪ್ರತಿಷ್ಠಾ ವರ್ಧಂತಿ, ವರ್ಷಾವಧಿ ಜಾತ್ರೋತ್ಸವ ಹಾಗೂ ದೈವಗಳ ನೇಮೋತ್ಸವ ಮತ್ತು ವಿವಿಧ ಅಭಿವೃದ್ಧಿ ಕಾಮಗಾರಿಗಳ ಲೋಕಾರ್ಪಣೆಯು ಮಾ.7ರಿಂದ ಮಾ.9ರ ತನಕ ವಿವಿಧ ವೈದಿಕ, ತಾಂತ್ರಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ನಡೆಯಲಿದೆ.
ಕ್ಷೇತ್ರದಲ್ಲಿ ಮಾ.7 ರಂದು ಬೆಳಿಗ್ಗೆ 6-45ಕ್ಕೆ ಅರ್ಧ ಏಕಾಹ ಭಜನೆ ಪ್ರಾರಂಭಗೊಳ್ಳಲಿದ್ದು, ವಿವಿಧ ಭಜನಾ ತಂಡಗಳಿಂದ ಭಜನೆ ನಡೆಯಲಿದೆ. ಸಂಜೆ ಹೊರೆಕಾಣಿಕೆ, ಉಗ್ರಾಣ ಪ್ರವೇಶ, ಅರ್ಧ ಏಕಾಹ ಭಜನೆಯ ಮಂಗಲೋತ್ಸವ, ರಂಗಪೂಜೆಯ ಬಳಿಕ ನೂತನವಾಗಿ ನಿರ್ಮಾಣಗೊಂಡಿರುವ ಮೇಲ್ಛಾವಣಿಯ ಲೋಕಾರ್ಪಣೆ ಮತ್ತು ಧಾರ್ಮಿಕ ಸಭೆ ನಡೆಯಲಿದೆ.
ಕಾರ್ಯಕ್ರಮದಲ್ಲಿ ಸುಬ್ರಹ್ಮಣ್ಯ ಮಠದ ಶ್ರೀವಿದ್ಯಾಪ್ರಸನ್ನ ತೀರ್ಥ ಸ್ವಾಮಿಜಿಯವರು ಆಶೀರ್ವಚನ ನೀಡಲಿದ್ದಾರೆ. ಶಾಸಕ ಸಂಜೀವ ಮಠಂದೂರು ಉದ್ಘಾಟಿಸಲಿದ್ದಾರೆ. ಅಮ್ಟಾಡಿ ಅಣ್ಣಪ್ಪ ಪಂಜುರ್ಲಿ ದೈವಸ್ಥಾನದ ಆಡಳಿ ಮೊಕ್ತೇಸರ ರವಿಶಂಕರ್ ಶೆಟ್ಟಿ ಮೇಲ್ಛಾವಣಿಯ ಲೋಕಾರ್ಪಣೆ ಮಾಡಲಿದ್ದಾರೆ. ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಮೂಡಂಬೈಲು ಡಾ. ರವಿ ಶೆಟ್ಟಿ ನೇಸರಕಂಪ ಅಧ್ಯಕ್ಷತೆ ವಹಿಸಲಿದ್ದಾರೆ. ಸಂಪ್ಯ ಶ್ರೀ ಮಹಾವಿಷ್ಣುಮೂರ್ತಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಡಾ.ಸುರೇಶ್ ಪುತ್ತೂರಾಯ, ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್‌ನ ನಿರ್ದೇಶಕ ಶಶಿಕುಮಾರ್ ರೈ ಬಾಲ್ಯೊಟ್ಟು, ನರಿಮೊಗರು ಸಾಂದೀಪನಿ ಗ್ರಾಮೀಣ ವಿದ್ಯಾಸಂಸ್ಥೆಗಳ ಸಂಚಾಲಕ ಭಾಸ್ಕರ ಆಚಾರ್ ಹಿಂದಾರು, ಉದ್ಯಮಿಗಳಾದ ಉಮೇಶ್ ನಾಡಾಜೆ, ಸದಾಶಿವ ರೈ ಸೋಂಪಾಡಿಗುತ್ತು, ಮುಂಡೂರು ಗ್ರಾ.ಪಂ ಅಧ್ಯಕ್ಷೆ ಪುಷ್ಪಾ ಪುರಂದರ ಗೌಡ ಮುಖ್ಯ ಅತಿಥಿಗಳಾಗಿ ಆಗಮಿಸಲಿದ್ದಾರೆ. ಸಭಾ ಕಾರ್ಯಕ್ರಮದ ಬಳಿಕ ಅನ್ನಸಂತರ್ಪಣೆ ನಡೆದು `ಶಿವಧೂತೆ ಗುಳಿಗ’ ತುಳು ಪೌರಾಣಿಕ ನಾಟಕ ನಡೆಯಲಿದೆ.
ಮಾ.8 ರಂದು ಬೆಳಿಗ್ಗೆ ದೇವತಾ ಪ್ರಾರ್ಥನೆ, ಆಚಾರ್ಯವರಣ, ಗಣಪತಿಹೋಮ, ಕಲಶ ಪೂಜೆ, ಕಲಶಾಭಿಷೇಕ, ನಾಗ ಸನ್ನಿಧಿಯಲ್ಲಿ ಆಶ್ಲೇಷ ಬಲಿ, ನಾಗತಂಬಿಲ, ದೈವಗಳಿಗೆ ತಂಬಿಲ, ಮಧ್ಯಾಹ್ನ ಮಹಾಪೂಜೆ, ಪ್ರಸಾದ ವಿತರಣೆ ಹಾಗೂ ಅನ್ನಸಂತರ್ಪಣೆ ನಡೆಯಲಿದೆ. ಸಂಜೆ ದೈವಗಳ ಭಂಡಾರ ತೆಗೆಯುವುದು, ನಂತರ ಶ್ರೀದೇವರ ಬಲಿ ಹೊರಟು, ಉತ್ಸವ, ವಸಂತ ಕಟ್ಟೆಪೂಜೆ, ಬೆಡಿಮದ್ದು ಪ್ರದರ್ಶನ, ಶ್ರೀದೇವರ ದರ್ಶನ ಬಲಿ, ಬಟ್ಟಲು ಕಾಣಿಕೆ, ಸಾರ್ವಜನಿಕ ಅನ್ನಸಂತರ್ಪಣೆ ನಡೆದ ಬಳಿಕ ಕ್ಷೇತ್ರದ ದೈವಗಳಾದ ಉಳ್ಳಾಕುಲು, ರಕ್ತೇಶ್ವರಿ, ವ್ಯಾಘ್ರಚಾಮುಂಡಿ, ವರ್ಣರ ಪಂಜುರ್ಲಿ, ಬೊಟ್ಟಿಭೂತ, ಗುಳಿಗ ದೈವಗಳ ನೇಮೋತ್ಸವ ನಡೆಯಲಿದೆ.
ಮಾ.9 ರಂದು ಕಲಶ ಆರಾಧನೆ, ಮಧ್ಯಾಹ್ನ ಮಹಾಪೂಜೆ, ಮಂತ್ರಾಕ್ಷತೆ, ಪ್ರಸಾದ ವಿತರಣೆಯೊಂದಿಗೆ ಕಾರ್ಯಕ್ರಮ ಸಂಪನ್ನಗೊಳ್ಳಲಿದೆ ಎಂದು ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಪ್ರಕಟಣೆಯಲ್ಲಿ ತಿಳಿಸಿದೆ.