ಮಂಗಳೂರು: ಜನರ ನಿರ್ಲಕ್ಷ್ಯದಿಂದಾಗಿ ಪ್ಲಾಸ್ಟಿಕ್ ಸೇರಿದಂತೆ ಇತರ ವಸ್ತುಗಳು ಸೇರಿ ಸಮುದ್ರ ಮಲೀನವಾಗಿ ಜಲಚರಗಳಿಗೆ ಅಪಾಯವಾಗುತ್ತಿದೆ. ಈ ನಡುವೆ ಮಂಗಳೂರಿನಲ್ಲಿ ಬಲೆಗೆ ಸಿಕ್ಕಿದ ಮೀನಿನ ಹೊಟ್ಟೆಯಲ್ಲಿ ಪ್ಲಾಸ್ಟಿಕ್ ಪತ್ತೆಯಾಗಿದೆ.
ಅತ್ತಾವರದ ಮೀನು ಮಾರಾಟ ಮಳಿಗೆಯ ಸಿಬ್ಬಂದಿ ಮುರು ಮೀನು (ರೀಫ್ ಕಾಡ್ ಫಿಶ್) ಅನ್ನು ಕತ್ತರಿಸಿ ಶುಚಿಗೊಳಿಸುತ್ತಿದ್ದ ಸಂದರ್ಭ ಮೀನಿನ ಹೊಟ್ಟೆಯಲ್ಲಿ ಪ್ಲಾಸ್ಟಿಕ್ ಪತ್ತೆಯಾಗಿದೆ. ಈ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿರುವ ಅವರು, “ಪ್ಲಾಸ್ಟಿಕ್‌ಗಳನ್ನು ನದಿ, ಸಮುದ್ರಕ್ಕೆ ಎಸೆಯುವುದನ್ನು ಮುಂದುವರೆಸಿದರೆ, ಮೀನಿನ ಸಂತತಿಯ ಮೇಲೆ ಪರಿಣಾಮ ಬೀರಲಿದೆ” ಎಂದು ತಿಳಿಸಿದ್ದಾರೆ.
ಮಂಗಳೂರಿನ ಮೀನುಗಾರಿಕಾ ಮಹಾವಿದ್ಯಾಲಯದ ಡೀನ್ ಡಾ. ಸೆಂಥಿಲ್‌ವೇಲ್ ಈ ಬಗ್ಗೆ ಪ್ರತಿಕ್ರಿಯೆ ನೀಡಿದ್ದು, “ಅನೇಕ ಬಾರಿ ಪ್ಲಾಸ್ಟಿಕ್‌ಗಳು ನೀರಿನಲ್ಲಿ ಸೇರಿ ಸಣ್ಣ ಕಣಗಳಾಗಿ ಪರಿವರ್ತನೆಯಾಗುತ್ತವೆ. ಆ ಕಣಗಳನ್ನು ಮೀನು ಮರಿಗಳು ತಿಂದು ಸಾಯುತ್ತವೆ. ಮೀನುಗಾರಿಕೆಯ ಸಂದರ್ಭ ಟ್ರಾಲ್ ದೋಣಿಗಳು ಸಮುದ್ರದ ಕೆಳಭಾಗವನ್ನು ತಲುಪಿದಾಗ ಶೇ.40ರಷ್ಟು ಪ್ಲಾಸ್ಟಿಕ್‌ಗಳು ಮೀನಿನ ಜೊತೆ ಬರುತ್ತವೆ. ಬಲೆಯನ್ನು ಮೇಲೆತ್ತುವ ಸಂದರ್ಭ ಆತಂಕದಿಂದ ಮೀನುಗಳು ಪ್ಲಾಸ್ಟಿಕ್ ಅನ್ನು ತಿನ್ನುವ ಸಾಧ್ಯತೆ ಅಧಿಕವಿದೆ. ಹೀಗಾಗಿಯೇ ಸಮುದ್ರದಲ್ಲಿ ಬೂತಾಯಿ ಮೀನಿನ ಪ್ರಮಾಣ ಕಡಿಮೆಯಾಗುತ್ತಿದೆ. ಹವಾಮಾನ ವೈಪರೀತ್ಯ, ಪ್ಲಾಸ್ಟಿಕ್, ಇತರ ಮಾಲಿನ್ಯದ ಕಾರಣದಿಂದ ಜಲಚರಗಳ ಮೇಲೆ ಪರಿಣಾಮ ಬೀರುತ್ತಿರುವುದು ಗಂಭೀರವಾದ ವಿಚಾರವಾಗಿದೆ” ಎಂದಿದ್ದಾರೆ.