ಪುತ್ತೂರು: ಆರ್ಯಾಪು ಗ್ರಾಮದ ಮಚ್ಚಿಮಲೆ ಸೀತಮ್ಮ ರವರಿಗೆ ಇನ್ನೂ ಕೂಡ 94ಸಿಸಿ ಹಕ್ಕು ಪತ್ರ ಸಿಗದೆ ಇರುವ ಹಿನ್ನಲೆಯಲ್ಲಿ ಮಾ.26ರಂದು ಮಾಜಿ ಶಾಸಕಿ ಶಕುಂತಳಾ ಶೆಟ್ಟಿ ರವರ ನೇತೃತ್ವದಲ್ಲಿ ಪುತ್ತೂರು ಮಿನಿ ವಿಧಾನ ಸೌಧದ ಎದುರು ಧರಣಿ ನಡೆಸಿದರು. ಧರಣಿಗೆ ಮಣಿದ ಇಲಾಖೆ ಮಧ್ಯಾಹ್ನ 12 ಗಂಟೆ ವೇಳೆ ಸೀತಮ್ಮ ರವರಿಗೆ ಹಕ್ಕುಪತ್ರ ವಿತರಣೆ ಮಾಡಲಾಯಿತು.
ಮಚ್ಚಿಮಲೆ ಸೀತಮ್ಮರವರಿಗೆ ಹಕ್ಕು ಪತ್ರ ನೀಡುವುದಾಗಿ ಕಂದಾಯ ಅಧಿಕಾರಿಗಳು ಕಳೆದ ಏಳು ವರ್ಷಗಳಿಂದ ಸತಾಯಿಸುತ್ತಾ ಬಂದಿದ್ದು ಈವರೆಗೆ ಅವರಿಗೆ ಹಕ್ಕು ಪತ್ರ ನೀಡದೇ ಇರುವುದರಿಂದ ಸೀತಮ್ಮರವರು ದೂರನ್ನು ನೀಡಿದ್ದು ಈ ಬಗ್ಗೆ ಕಂದಾಯ ಅಧಿಕಾರಿಗಳಲ್ಲಿ ಹಾಗೂ ಇತರೆ ಸಂಬಂಧಪಟ್ಟವರಲ್ಲಿ ಸೀತಮ್ಮರ ಪರ ಮನವಿ ಸಲ್ಲಿಸಿದರೂ ಈವರೆಗೆ ಅಧಿಕಾರಿಗಳು ಸ್ಪಂದಿಸಲಿಲ್ಲ. ಈ ನಿಟ್ಟಿನಲ್ಲಿ ಪುತ್ತೂರು ಮಿನಿ ವಿಧಾನ ಸೌಧದ ಎದುರು ಧರಣಿ ನಡೆಸಲಾಗುದೆಂದು ಮಾಜಿ ಶಾಸಕಿ ಶಕುಂತಳಾ ಶೆಟ್ಟಿ ಈ ಹಿಂದೆ ತಿಳಿಸಿದ್ದಂತೆ ಇಂದು ಬೆಳಿಗ್ಗೆ ಧರಣಿ ಕುಳಿತರು.
ಈ ಸಂದರ್ಭದಲ್ಲಿ ಸ್ಥಳಕ್ಕೆ ಆಗಮಿಸಿದ ತಹಶೀಲ್ದಾರ್ ರಮೇಶ್ ಬಾಬು ಸೀತಮ್ಮ ರವರಿಗೆ ಸರಕಾರದ ಶುಲ್ಕವನ್ನು ಪಾವತಿಸುವಂತೆ ತಿಳಿಸಿದರು. ತಕ್ಷಣ ಧರಣಿ ನಿರತ ಮಾಜಿ ಶಾಸಕಿ ಸೇರಿದಂತೆ ಕಾಂಗ್ರೆಸ್ ಕಾರ್ಯಕರ್ತರು ಸೀತಮ್ಮರವರ 94 ಸಿಸಿ ಹಕ್ಕುಪತ್ರಕ್ಕೆ ಹಣ ಸಂಗ್ರಹ ಮಾಡಿ, ತಕ್ಷಣ ಬ್ಯಾಂಕ್ ಗೆ ಹಣ ಪಾವತಿಸಿದರು. ಬಳಿಕ ತಹಶೀಲ್ದಾರ್ ಸೀತಮ್ಮರವರಿಗೆ 94ಸಿಸಿ ಹಕ್ಕುಪತ್ರದ ಪ್ರತಿಯನ್ನು ನೀಡಿದರು. ಮಾಜಿ ಶಾಸಕಿ ಶಕುಂತಳಾ ಶೆಟ್ಟಿಯವರು ಧರಣಿಯನ್ನು ಹಿಂಪಡೆದರು.