ಮಂಗಳೂರು: ಪೊಲೀಸರ ಕಾರ್ಯದಕ್ಷತೆಯನ್ನು ಹೆಚ್ಚಿಸುವ ನಿಟ್ಟಿನಲ್ಲಿ ಅವರನ್ನು ಸ್ಲಿಮ್ ಅಂಡ್ ಟ್ರಿಮ್ ಮಾಡಲು ಮಂಗಳೂರು ಪೊಲೀಸ್ ಕಮಿಷನರೇಟ್ ವತಿಯಿಂದ ತಿಂಗಳ ಕಾಲ ನಡೆದ ಪೊಲೀಸ್ ಅಧಿಕಾರಿಗಳ ಮತ್ತು ಸಿಬ್ಬಂದಿಯ ದೈಹಿಕ ಸಾಮರ್ಥ್ಯ, ಬಲವರ್ಧನೆ ಹಾಗೂ ದೈಹಿಕ ಸದೃಢತೆಯ ಕಾರ್ಯಾಗಾರ ಸೋಮವಾರದಂದು ಸಮಾರೋಪಗೊಂಡಿದೆ. ಮಂಗಳೂರು ನಗರ ಪೊಲೀಸ್ ಕಮಿಷನರ್ ಕಾರ್ಯಕ್ರಮದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಮಲೆಯಾಳಂನ ಜುಮುಕಿ ಕಮಲ್ ಹಾಡಿಗೆ ನೃತ್ಯ ಮಾಡುವ ಮೂಲಕ ಗಮನ ಸೆಳೆದಿದ್ದಾರೆ.
ಮಂಗಳೂರು ನಗರ ಪೊಲೀಸ್ ಕಮಿಷನರ್ ಎನ್ ಶಶಿಕುಮಾರ್ ಮತ್ತು ಕಾನೂನು ಮತ್ತು ಸುವ್ಯವಸ್ಥೆ ಡಿಸಿಪಿ ಹರಿರಾಂ ಶಂಕರ್, ತುಳು ಚಿತ್ರ ನಟ ಪೃಥ್ವಿ ಅಂಬರ್ ಜೊತೆಗೆ ಹಾಗೂ ಇತರ ಪೊಲೀಸ್ ಸಿಬ್ಬಂದಿಗಳ ಜೊತೆಗೆ ಡ್ಯಾನ್ಸ್ ಮಾಡಿದ್ದಾರೆ.ಸಮಾರೋಪ ಸಮಾರಂಭದಲ್ಲಿ ಗೃಹ ಸಚಿವ ಬಸವರಾಜ ಬೊಮ್ಮಾಯಿ ಪಾಲ್ಗೊಂಡು ತೆರಳಿದ ಬಳಿಕ ಸಭಾ ಕಾರ್ಯಕ್ರಮದ ಕೊನೆಯಲ್ಲಿ ಪೊಲೀಸ್ ಸಿಬ್ಬಂದಿ ಹಾಗೂ ಅವರ ಪರಿವಾರದ ಸದಸ್ಯರಿಂದ ಸಾಂಸ್ಕೃತಿಕ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಈ ಸಂದರ್ಭ ಖುದ್ದು ಕಮಿಷನರ್ ಮತ್ತು ಡಿಸಿಪಿ ತಾವು ಧರಿಸಿದ್ದ ಪೊಲೀಸ್ ದಿರಿಸಿನಲ್ಲೇ ಡ್ಯಾನ್ಸ್ ಮಾಡಿ ಗಮನ ಸೆಳೆದರು. ಇವರಿಬ್ಬರ ಡ್ಯಾನ್ಸ್ ಕಂಡು ಎಲ್ಲರೂ ಮೂಕವಿಸ್ಮಿತರಾದರು.