ಉಪ್ಪಿನಂಗಡಿ: 34 ನೆಕ್ಕಿಲಾಡಿ ನಿವಾಸಿ ‘ಸ್ನೇಕ್ ಮುಸ್ತಾ’ ಎಂದೇ ಚಿರಪರಿಚಿತರಾಗಿದ್ದ ಎಂ.ಆರ್. ಮಹಮ್ಮದ್ ಮುಸ್ತಾಫ ನಿನ್ನೆ ಮನೆಯೊಂದರಲ್ಲಿ ನಾಗರಹಾವು ಹಿಡಿದು ರಕ್ಷಿಸಲು ಹೋಗಿ ಹಾವು ಕಡಿತದಿಂದಾಗಿ ಮೃತಪಟ್ಟಿದ್ದಾರೆ.
34 ನೆಕ್ಕಿಲಾಡಿ ಬೊಳಂತಿಲ ಹೊಸ ಕಾಲನಿ ನಿವಾಸಿ ಎಂ.ಆರ್. ಮುಸ್ತಾಫ ವೃತ್ತಿಯಲ್ಲಿ ಆಟೋ ರಿಕ್ಷಾ ಚಾಲಕರಾಗಿದ್ದ ಇವರು ವಿಷಕಾರಿ ಹಾವುಗಳನ್ನು ಹಿಡಿದು ರಕ್ಷಿಸಿ ಕಾಡಿಗೆ ಬಿಡುವುದನ್ನು ಹವ್ಯಾಸವನ್ನಾಗಿ ಮಾಡಿಕೊಂಡಿದ್ದರು.
ನಿನ್ನೆ ಸಂಜೆ ಬೆಳ್ತಂಗಡಿ ತಾಲೂಕಿನ ನೇಜಿಕಾರಿನಲ್ಲಿ ಮನೆಯೊಂದಕ್ಕೆ ನಾಗರಹಾವು ಬಂದಿದ್ದು, ಮನೆಮಂದಿ ಇವರಿಗೆ ಕರೆ ಮಾಡಿದ್ದು, ಅದನ್ನು ಹಿಡಿದು ರಕ್ಷಿಸಲು ಅಲ್ಲಿಗೆ ತೆರಳಿದ್ದರು. ಹಾವು ಹಿಡಿಯುತ್ತಿದ್ದ ಸಂದರ್ಭ ಇವರಿಗೆ ಹಾವು ಕಚ್ಚಿದ್ದು, ತೀವ್ರ ಅಸ್ವಸ್ಥಗೊಂಡ ಇವರನ್ನು ಪುತ್ತೂರು ಆಸ್ಪತ್ರೆಗೆ ಸಾಗಿಸಿ, ಬಳಿಕ ಹೆಚ್ಚಿನ ಚಿಕಿತ್ಸೆಗೆಂದು ಮಂಗಳೂರಿಗೆ ತೆಗೆದುಕೊಂಡು ಹೋಗುತ್ತಿದ್ದಾಗ ದಾರಿ ಮಧ್ಯೆ ಮೃತಪಟ್ಟಿದ್ದಾರೆ.
ಮೃತರು ಪತ್ನಿ ಹಾಗೂ ನಾಲ್ಕು ವರ್ಷದ ಹಾಗೂ ಎರಡು ವರ್ಷದ ಇಬ್ಬರು ಪುತ್ರರನ್ನು ಅಗಲಿದ್ದಾರೆ.