ಇವನಿನ್ನೂ ಏಳರ ಹರೆಯದ ಪುಟಾಣಿ ಪೋರ…ಆದರೆ ಈತನ ದನಿಗೆ ತಲೆಬಾಗದವರೇ ಇಲ್ಲ..ಕೊರಗಜ್ಜನ ಕೃಪೆ ಈತನ ಕಂಠದಲ್ಲಿ ರಾರಾಜಿಸುತ್ತಿದೆ. ಸಾಕ್ಷಾತ್ ದೈವಾನುದೇವರುಗಳ ಕೃಪಕಟಾಕ್ಷದಿಂದಲೇ ಈ ಪ್ರತಿಭೆಯ ಕೃಪೆ ಇಂದು ನಮ್ಮ ಕಣ್ಣ ಮುಂದಿದೆ ಅಂದರೂ ಅತಿಶಯೋಕ್ತಿ ಅನಿಸದು.
ಕೋಗಿಲೆಯಂತೆ ಇಂಪಾದ ದನಿ, ಈತನ ಹಾಡು ಕೇಳುವಾಗಲೇ ಮೈ ಜುಮ್ ಎನಿಸುತ್ತದೆ. ಇತ್ತೀಚೆಗೆ ಸಾಮಾಜಿಕ ಜಾಲತಾಣ ತುಂಬಾ ಈ ಹೆಸರು ಹರಿದಾಡುತ್ತಿದೆ. ಬಡತನ-ಅಂಗವೂನ ಸಾಧನೆಗೆ ಅಡ್ಡಿಯೇ ಅಲ್ಲ ಎಂಬುದನ್ನು ಸಾಬೀತುಪಡಿಸಿದ್ದಾನೆ ಈ ಮುದ್ದಾದ ಕುವರ. ಇವನೇ ಕಾರ್ತಿಕ್. ಹೌದು, ಜೀವನದಲ್ಲಿ ಪ್ರತಿಯೊಬ್ಬರಿಗೂ ನೂರಾರು ಸಮಸ್ಯೆಗಳು ಇದ್ದೇ ಇರುತ್ತದೆ. ಅಂತೆಯೇ ಕಾರ್ತಿಕ್ ಬದುಕು ಕೂಡಾ..ಮನೆಯಲ್ಲಿ ತೀರದ ಬಡತನ, ಕಾರ್ತಿಕ್ ಜನಿಸುತ್ತಲೇ ಹುಟ್ಟು ಅಂಗವೈಕಲ್ಯತೆ. ದೃಷ್ಟಿ ಸಮಸ್ಯೆ, ಜೊತೆಗೆ ಆರೋಗ್ಯ ಸಮಸ್ಯೆ, ಬುದ್ಧಿಮಾಂದ್ಯತೆ…ಒಟ್ಟಿನಲ್ಲಿ ಕಾರ್ತಿಕ್ ಅನ್ನುವ ಪುಟಾಣಿ ಆಂತರ್ಯದೊಳಗೆ ಹಲವು ಶಾರೀರಿಕ ಸಮಸ್ಯೆಗಳು.ಆದರೆ ಎಲ್ಲರಲ್ಲೂ ಒಂದಲ್ಲಾ ಒಂದು ಕ್ರಿಯತ್ಮಕ ಪ್ರತಿಭೆ ಇದ್ದೇ ಇರುತ್ತದೆ ಅನ್ನುವ ಮಾತಿಗೆ ಇವನೇ ಪ್ರತ್ಯಕ್ಷ ನಿದರ್ಶನ.
ಕಾರ್ಕಳ ತಾಲೂಕಿನ ಹೀರ್ಗಾಣ ಎಂಬ ಪುಟ್ಟ ಗ್ರಾಮವೊಂದರ, ಪೂವಪ್ಪ ಮತ್ತು ಲೋಲಾಕ್ಷಿ ದಂಪತಿಗಳ ಮೂರು ಮಕ್ಕಳ ಪೈಕಿ ಮೂರನೇ ಮಗುವೇ ಈ ಕಾರ್ತಿಕ್. ಮಗು ಜನಿಸುವಾಗಲೇ ಸಮಸ್ಯೆಯಿದದು, ನಾಲ್ಕು ವರ್ಷವಾಗುವವರೆಗೂ ನಡೆಯಲೂ ಅಸಾಧ್ಯವಾಗಿತ್ತು..ಪ್ರಪಂಚದ ಪರಿವೆಯೇ ಇಲ್ಲದೆ, ಸ್ವಚ್ಛಂದವಾಗಿ ಹಾರಾಡುವ ಸ್ವತಂತ್ರವೂ ಇಲ್ಲ, ಅಕ್ಷರ ಜ್ಞಾನವೂ ಇಲ್ಲ ಆದರೂ ಕೊರಗಜ್ಜ ಮತ್ತು ಮಂತ್ರದೇವತೆಯ ಹಾಡುಗಳನ್ನು ಈ ಪುಟಾಣಿ ತನ್ನ ತೊದಲು ನುಡಿಯಲ್ಲೇ ಮುದ್ದಾಗಿ-ಇಂಪಾಗಿ ಹಾಡುತ್ತಾನೆ..ಥೇಟ್ ನೈಜ ಸ್ವರವೇ ಇಲ್ಲೂ ಮನಸ್ಫುಟಲಗಳಿಗೆ ನಾಟುವಂತಿದೆ. ಈತನ ಹಾಡು ಕೇಳಿದರೆ ಮತ್ತೆ ಮತ್ತೆ ಕೇಳಬೇಕೆನ್ನುವ ಭಾವ ಮನೆಮಾಡುತ್ತದೆ.
ಈಗ ಹಲವು ಸಂಘಟನೆಗಳು ಕೂಡಾ ಮಗುವಿನ ಈ ಪ್ರತಿಭೆಗೆ ಬೆಂಬಲವಾಗಿ ನಿಂತಿದ್ದು, ಈತನ ಹಾಡನ್ನು ಮೆಚ್ಚಿಕೊಂಡು ಅವಕಾಶಗಳ ಸಾಗರವೂ ಹರಿದುಬರುತ್ತಿದೆ. ಈ ಪುಟಾಣಿ ಆದಷ್ಟು ಬೇಗ ಎಲ್ಲರಂತಾಗಲಿ, ಗಾಯನ ಎನ್ನುವ ಲೋಕದೊಳಗೆ ತುಳುನಾಡಿಗೆ ಹೆಮ್ಮೆಯ ಗಾಯಕನಾಗಿ ಮೂಡಿ ಬರಲಿ ಎಂಬುದೇ ನಮ್ಮೆಲ್ಲರ ಆಶಯ..
ಪ್ರಜ್ಞಾ ಓಡಿಲ್ನಾಳ
To Watch Click Here