ವಿಟ್ಲ: ಕೋವಿಡ್-19 ಸೋಂಕು ಹರಡದಂತೆ ಸರ್ಕಾರವು ರೂಪಿಸಿರುವ ಸೂಚನೆಗಳನ್ನು ಹಾಗೂ ದ.ಕ.ಜಿಲ್ಲಾ ದಂಡಾಧಿಕಾರಿಯವರ ಆದೇಶವನ್ನು ಪಾಲನೆ ಮಾಡದೇ ಉಲ್ಲಂಘಿಸಿದ ವಿಟ್ಲದ ಪುತ್ತೂರು ರಸ್ತೆಯಲ್ಲಿರುವ ಕ್ಯೂಬಿ ಮತ್ತು ಫಿಟ್ ಫ್ಯಾಷನ್ ಬಟ್ಟೆ ಅಂಗಡಿಗಳ ಮಾಲಕರು ಮೇ 7ರಂದು ಬೆಳಗ್ಗೆ 7 ಗಂಟೆಗೆ ಬಾಗಿಲು ತೆರೆದು ಗ್ರಾಹಕರಿಗೆ ಬಟ್ಟೆಯನ್ನು ಮಾರಾಟ ಮಾಡಿದ ಬಗ್ಗೆ ವಿಟ್ಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕ್ಯೂಬಿ ಬಟ್ಟೆ ಅಂಗಡಿಗೆ ಪಟ್ಟಣ ಪಂಚಾಯತ್ ಅಧಿಕಾರಿಗಳು ದಾಳಿ ಮಾಡಿ 3500 ರೂ ದಂಡ ವಿಧಿಸಿದ್ದರು. ಎರಡೂ ಅಂಗಡಿಗಳ ವಿರುದ್ಧ ವಿಟ್ಲ ಪ.ಪಂ.ಮುಖ್ಯಾಧಿಕಾರಿ ಮಾಲಿನಿ ಮತ್ತು ಸಿಬಂದಿಗಳ ತಂಡವು ಪೊಲೀಸರೊಂದಿಗೆ ದಾಳಿ ಮಾಡಿತ್ತು.
ಕ್ಯೂಬಿ ಬಟ್ಟೆ ಅಂಗಡಿ ಮಾಲಕ ಎದುರುಗಡೆ ರೋಲಿಂಗ್ ಶಟರ್ ಮುಚ್ಚಿ, ಹಿಂಬಾಗಿಲನ್ನು ತೆರೆದು ಗ್ರಾಹಕರನ್ನು ಒಳಗೆ ಬರಮಾಡಿಕೊಂಡು ವ್ಯಾಪಾರ ಮಾಡಿದ್ದರೆ, ಫಿಟ್ ಫ್ಯಾಶನ್ ಮಾಲಕ ಎದುರುಗಡೆ ರೋಲಿಂಗ್ ಶಟರನ್ನು ಅರ್ಧ ತೆರೆದು ವ್ಯಾಪಾರ ಮಾಡುತ್ತಿದ್ದರು.