ಪುತ್ತೂರಿನಲ್ಲಿ ಬಡವರ ಹಸಿವು ನೀಗಿಸುವ ಇಂದಿರಾ ಕ್ಯಾಂಟೀನ್ ನ ಬಗ್ಗೆ ಬಿಜೆಪಿಗರು ಬಹಳ ಗದ್ದಲವನ್ನು ಎಬ್ಬಿಸುತ್ತಿದ್ದು, ಕೇವಲ ಎಂಟು ಊಟದ ಬಗ್ಗೆ ಬಹಳ ದೊಡ್ಡದಾದಂತಹ ಗದ್ದಲವನ್ನು ಎಬ್ಬಿಸಿ, ಅದರಲ್ಲಿ ಅವ್ಯವಹಾರ ನಡೆಯುತ್ತಿದೆ ಎನ್ನುತ್ತಿರುವ ಬಿಜೆಪಿಗರಿಗೇ ಮೊದಲೇ ಇಂದಿರಾ ಕ್ಯಾಂಟೀನ್ ಎಂದರೆ ಅಲರ್ಜಿ, ಈ ರೀತಿ ಸುಳ್ಳು ಆರೋಪ ಮಾಡಿ ಇಂದಿರಾ ಕ್ಯಾಂಟೀನ್ ಅನ್ನು ಮುಚ್ಚಿಸುವಂತ ಹುನ್ನಾರವನ್ನು ನಡೆಸುತ್ತಿದ್ದಾರೆ ಎಂದು ಪುತ್ತೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಹಮ್ಮದ್ ಆಲಿಯವರು ಆರೋಪಿಸಿದ್ದಾರೆ.
ಇಂದಿರಾ ಕ್ಯಾಂಟೀನ್ ಬಗ್ಗೆ ಶಾಸಕರು ಮತ್ತು ಬಿಜೆಪಿಗರು ಬಹಳಷ್ಟು ಟೀಕೆ ಮಾಡುತ್ತಿದ್ದಾರೆ, ಆದರೆ ಕೋವಿಡ್ ಸೆಂಟರ್ ನಲ್ಲಿ ಕೋವಿಡ್ ರೋಗಿಗಳಿಗೆ ನೀಡುವಂತಹ ಆಹಾರದಲ್ಲಿ ಅವ್ಯವಹಾರ ನಡೆಸುತ್ತಿದ್ದಾರೆ ಎಂದು ಅವರು ಆರೋಪಿಸಿದರು. ಪುತ್ತೂರಿನಲ್ಲಿ ಎರಡು ಕೋವಿಡ್ ಸೆಂಟರ್ ಗಳಿವೆ. ಒಂದು ಪುತ್ತೂರು ಸರ್ಕಾರಿ ಆಸ್ಪತ್ರೆಯಲ್ಲಿ 30 ಜನ ಕೋವಿಡ್ ಸೋಂಕಿತರಿದ್ದು ಹಾಗೂ ಬಲ್ನಾಡಿನ ಮೊರಾರ್ಜಿ ಶಾಲೆಯಲ್ಲಿ 20 ಜನ ಕೋವಿಡ್ ಸೋಂಕಿತರಿದ್ದು, ಸರಕಾರದ ಸುತ್ತೋಲೆಯಂತೆ ಕೋವಿಡ್ ರೋಗಿಗಳಿಗೆ ದಿನಕ್ಕೆ 225 ರಂತೇ ವೆಚ್ಚದಲ್ಲಿ ಆಹಾರ ವಿತರಣೆ ಮಾಡಬೇಕೆಂದು ಸರಕಾರ ಆದೇಶ ಮಾಡಿದೆ. ಆ ಆದೇಶದಂತೆ ವೇಳಾಪಟ್ಟಿಯನ್ನು ಸಹ ಸರಕಾರ ಹೊರಡಿಸಿದೆ. ಒಂದು ವಾರ ಬೆಳಿಗ್ಗಿನ ಉಪಹಾರದಲ್ಲಿ ರವೆ ಇಡ್ಲಿ, ಒಂದು ವಾರ ಪೊಂಗಲ್, ಒಂದು ವಾರ ಸೆಟ್ ದೋಸೆ, ಅಕ್ಕಿ ಇಡ್ಲಿ, ಬಿಸಿ ಬೇಳೆ ಬಾತ್, ಚೌ ಚೌ ಬಾತ್ ಈ ರೀತಿಯಾಗಿ ವಾರದ ದಿನಗಳಲ್ಲಿ ಉಪಹಾರ ನೀಡಬೇಕಾಗಿ ಸರಕಾರ ವೇಳಾಪಟ್ಟಿಯನ್ನು ಬಿಡುಗಡೆ ಮಾಡಿದೆ. ಬೆಳಿಗ್ಗೆ 10 ಗಂಟೆಗೆ ಕಲ್ಲಂಗಡಿ ಹಣ್ಣು ಅಥವಾ ಪಪ್ಪಾಯ ಹಣ್ಣು, ಖರ್ಬುಜಾ ಹಣ್ಣು ಈ ರೀತಿಯ ಹಣ್ಣು ಹಂಪಲುಗಳನ್ನು ನೀಡಬೇಕಾಗಿ ವೇಳಾಪಟ್ಟಿಯಲ್ಲಿದ್ದು, ರಾಗಿಗಂಜಿ, ಪಾಲಕ್ ಸೂಪ್, ರವೆ ಗಂಜಿ, ಕ್ಯಾರೆಟ್ ಸೂಪ್ ಬೇರೆ ಬೇರೆ ದಿನಗಳಲ್ಲಿ ಈ ರೀತಿಯ ಸೂಪ್ ಗಳನ್ನು ಎಂದು ಸರ್ಕಾರ ತಿಳಿಸಿದೆ. ಮದ್ಯಾಹ್ನ ಊಟಕ್ಕೆ ರೊಟ್ಟಿ, ಚಪಾತಿ, ಬೇಳೆ ಸಾರು ಈ ರೀತಿಯ ಆಹಾರ ನೀಡಬೇಕು ಹಾಗೇ ಸಂಜೆ 5.30 ಕ್ಕೆ ಏಲಕ್ಕಿ ಬಾಳೆಹಣ್ಣು, ಮಾರಿ ಬಿಸ್ಕೆಟ್, ಪ್ರೊಟೀನ್ ಬಿಸ್ಕೆಟ್ ಗಳು ಮತ್ತು ಬೇರೆ ಬೇರೆ ರೀತಿಯ ಪ್ರೊಟೀನ್ ಗಳಿರುವಂತಹ ಆಹಾರವನ್ನು ನೀಡಬೇಕು ಎಂದು ತಿಳಿಸಿದೆ. ಅದೇ ರೀತಿ ರಾತ್ರಿ 7 ಗಂಟೆಗೆ ಊಟದಲ್ಲಿ ರೊಟ್ಟಿ, ಚಪಾತಿ, ಅನ್ನ, ಪಲ್ಯ ಬೇಳೆ ಸಾರು, ಅನ್ನ ಸಾಂಬಾರು ಹಾಗೂ ರಾತ್ರಿ 9 ಗಂಟೆಗೆ ಹಾಲು ನೀಡಬೇಕು ಎಂದು ಸರ್ಕಾರ ವೇಳಾಪಟ್ಟಿಯಲ್ಲಿ ತಿಳಿಸಿದೆ. ಒಂದು ಕೋವಿಡ್ ರೋಗಿಗೆ ದಿನಕ್ಕೆ 225 ರೂ. ಯಂತೇ ಖರ್ಚು ಮಾಡಲು ಸರ್ಕಾರ ಅವಕಾಶ ನೀಡಿದೆ. ಆದರೇ ಈ ಕೋವಿಡ್ ಸೆಂಟರ್ ಗಳಿಗೆ ಯಾವುದೇ ಟೆಂಡರ್ ಅನ್ನು ಕರೆಯದೇ ಯಾವುದೇ ಟೆಂಡರ್ ವಿಚಾರವನ್ನು ಪತ್ರಿಕೆ ಮೂಲಕ ಜನರಿಗೆ ತಿಳಿಸದೆ, ಪೈ ಕ್ಯಾಟರರ್ಸ್ ನವರಿಗೆ ಈ ಆಹಾರ ಪೂರೈಕೆ ಮಾಡುವಂತಹ ಜವಾಬ್ದಾರಿಯನ್ನು ನೀಡಿದೆ. ಈ ಕೋವಿಡ್ ರೋಗಿಗಳಿಗೆ ಸರಿಯಾದ ರೀತಿಯಾ ಆಹಾರವನ್ನು ನೀಡದೆ, 225 ರೂ. ಖರ್ಚು ಮಾಡುವಲ್ಲಿ ಕೇವಲ 100 ರೂಪಾಯಿಯ ಆಹಾರವನ್ನು ನೀಡಿ 125 ರೂ. ಹಣವನ್ನು ಬಿಜೆಪಿಗರು ದುರುಪಯೋಗ ಪಡಿಸಿಕೊಳ್ಳುತ್ತಿದ್ದಾರೆ ಎಂದರು.
ಇಂದಿರಾ ಕ್ಯಾಂಟೀನ್ ನ ಎಂಟು ಊಟದ ಬಗ್ಗೆ ಗದ್ದಲ ಎಬ್ಬಿಸಿರುವ ಬಿಜೆಪಿಯವರು ಯಾವುದೇ ನೀತಿ ನಿಯಮವನ್ನು ಪಾಲಿಸದೇ ತನ್ನದೇ ಪಕ್ಷದ ಕಾರ್ಯಕರ್ತರಿಗೆ ಮತ್ತು ಬಿಜೆಪಿಯ ನಗರ ಸಭಾ ಸದಸ್ಯ ರಾದ ದೀಕ್ಷಾ ಪೈ ರವರ ಪೈ ಕ್ಯಾಟರರ್ಸ್ ಆಹಾರ ಪೂರೈಕೆ ಮಾಡಲು ಜವಾಬ್ದಾರಿ ನೀಡಿ ಹಣವನ್ನು ದುರುಪಯೋಗ ಮಾಡಿಕೊಳ್ಳುತ್ತಿದ್ದಾರೆ ಎಂದು ಮಹಮ್ಮದ್ ಆಲಿ ಆರೋಪಿಸಿದರು.
ವೇಳಾಪಟ್ಟಿಯ ಪ್ರಕಾರ ಆಹಾರ ಪೂರೈಕೆ ಮಾಡಬೇಕು ಎಂಬುದು ಯಾವ ರೋಗಿಗಳಿಗೂ ತಿಳಿದಿಲ್ಲ, ಹತ್ತು ದಿನಗಳ ಹಿಂದೆ ಇಬ್ಬರೂ ಕೋವಿಡ್ ಸೋಂಕಿತರು ನನಗೆ ಕರೆ ಮಾಡಿ ಇಲ್ಲಿ ನಮಗೆ ಸರಿಯಾದ ರೀತಿಯ ಆಹಾರ ಪೂರೈಕೆಯಾಗುತ್ತಿಲ್ಲ ಎಂದು ಹೇಳಿದರು. ಸೋಂಕಿತರು ನನಗೆ ಕರೆ ಮಾಡಿ ತಿಳಿಸಿದಾಗ ನಾನು ವೈದ್ಯಾಧಿಕಾರಿಗಳಿಗೆ ಕರೆ ಮಾಡಿ ವಿಚಾರ ತಿಳಿಸಿದ ಸಂದರ್ಭದಲ್ಲಿ ಇಲ್ಲಿ ಎಲ್ಲವೂ ಸರಿ ಇದೆ ಉತ್ತಮ ಆಹಾರ ಪೂರೈಕೆಯನ್ನೇ ಮಾಡುತ್ತಿದ್ದೇವೆ ಎಂದರು ವೈದ್ಯಾಧಿಕಾರಿಗಳು ಯಾವುದೇ ಲೋಪಗಳನ್ನು ಹೊರಗಡೆ ಹೇಳದಂತೆ ಬಿಜೆಪಿಗರು ಕಾರ್ಯ ನಿರ್ವಹಿಸುತ್ತಿದ್ದಾರೆ. ಇಂದಿರಾ ಕ್ಯಾಂಟೀನ್ ಗೆ ಶಾಸಕರು ತೆರಳಿ ಪರಿಶೀಲನೆ ನಡೆಸಿ ಎಂಟು ಊಟವನ್ನು ಒಬ್ಬರೂ ಕೊಂಡೊಯ್ದ ಬಗ್ಗೆ ಅದನ್ನು ತಕರಾರು ಎಬ್ಬಿಸಿದ ಮೇರೆಗೆ ಶಕುಂತಲಾ ಶೆಟ್ಟಿಯವರು ಬಡವರಿಗೆ ನೀಡುವ ಆಹಾರದಲ್ಲಿಯೂ ಇವರು ಹುಳುಕು ಹುಡುಕುತ್ತಿದ್ದಾರೆ ಎಂದು ಅದನ್ನು ಆಕ್ಷೇಪ ಮಾಡಿದರು. ಎಂಟು ಊಟವನ್ನಾ ಲಕಾರ್ ನಲ್ಲಿ ಇಡಲು ಸಾಧ್ಯವೇ, ಎಂಟು ಊಟವನ್ನು ಕೊಂಡು ಹೋಗಿ ಏನು ಮಾಡಲು ಸಾಧ್ಯ..? ಅದನ್ನು ಊಟ ಮಾಡಬೇಕಷ್ಟೆ ಬೇರೇನೂ ಮಾಡಲು ಸಾಧ್ಯವಿಲ್ಲ ಎಂದು ಶಕುಂತಲಾ ಶೆಟ್ಟಿಯವರು ಹೇಳಿದ್ದು, ಅವರ ಈ ಹೇಳಿಕೆಯನ್ನು ಸಹಿಸಲಾಗದೆ ಶಕುಂತಲಾ ಶೆಟ್ಟಿ ಯವರ ವಿರುದ್ಧ ಸಾಮಾಜಿಕ ಜಾಲತಾಣ ಗಳಲ್ಲಿ ಹಾಗೂ ಪತ್ರಿಕಾಗೋಷ್ಠಿಯಲ್ಲಿ ತೇಜೊವಧೆ ಮಾಡುವಂತದ್ದು ಹಾಗೂ ಇಂದಿರಾ ಕ್ಯಾಂಟೀನ್ ನ ವ್ಯವಸ್ಥೆಯ ಬಗ್ಗೆ ಅಪಪ್ರಚಾರ ಮಾಡುವಂತಹ ಕೆಲಸವನ್ನು ಬಿಜೆಪಿಗರು ಮಾಡುತ್ತಿದ್ದಾರೆ ಎಂದರು.