ಪುತ್ತೂರು : ಮಹಿಳೆಯೋರ್ವರು ನೀಡಿದ್ದ ದೂರಿನ ಮೇರೆಗೆ ಬಿಜೆಪಿ ಮುಖಂಡ ಅರುಣ್ ಕುಮಾರ್ ಪುತ್ತಿಲ ಅವರ ವಿರುದ್ದ ದಾಖಲಾಗಿರುವ ಪ್ರಕರಣವನ್ನು ಮುಂದಿನ ವಿಚಾರಣೆಗಾಗಿ ಬೆಂಗಳೂರು ಸಿಟಿ ಸಿವಿಲ್ ನ್ಯಾಯಾಲಯಕ್ಕೆ ವರ್ಗಾವಣೆಗೊಳಿಸಿ ಪುತ್ತೂರು ನ್ಯಾಯಾಲಯದಲ್ಲಿ ಆದೇಶವಾಗಿದೆ.
ಲೈಂಗಿಕ ದೌರ್ಜನ್ಯ, ನಂಬಿಕೆ ದ್ರೋಹ, ಕೊಲೆ ಬೆದರಿಕೆಯೊಡ್ಡಿರುವ ಆರೋಪ ಹೊರಿಸಿ ಮಹಿಳೆಯೋರ್ವರು ನೀಡಿದ್ದ ದೂರಿನ ಮೇರೆಗೆ ಆರಂಭದಲ್ಲಿ ಅರುಣ್ ಕುಮಾರ್ ಪುತ್ತಿಲ ಅವರ ವಿರುದ್ಧ ಪುತ್ತೂರು ಮಹಿಳಾ ಠಾಣೆ ಪೊಲೀಸರು ಐಪಿಸಿ ಸೆಕ್ಷನ್ 417,354(ಎ), 506ರಡಿ ಪ್ರಕರಣ(ಅ.ಕ್ರ. 0045/2024) ದಾಖಲಿಸಿಕೊಂಡಿದ್ದರು. ಪ್ರಕರಣದ ಕುರಿತು ಸಂತ್ರಸ್ತೆಯು ನ್ಯಾಯಾಧೀಶರೆದುರು ಸ್ವತಂತ್ರ ಹೇಳಿಕೆ ನೀಡಿದ್ದ ಬಳಿಕದ ಬೆಳವಣಿಗೆಯಲ್ಲಿ ಪೊಲೀಸರು ಆರುಣ್ ಕುಮಾರ್ ಪುತ್ತಿಲ ಅವರ ವಿರುದ್ದ ಅತ್ಯಾಚಾರ ಆರೋಪವನ್ನೂ ಸೇರಿಸಿ ನ್ಯಾಯಾಲಯಕ್ಕೆ ವರದಿ ಸಲ್ಲಿಸಿದ್ದರು.
ಘಟನೆ ಬೆಂಗಳೂರು ವ್ಯಾಪ್ತಿಯಲ್ಲಿ ನಡೆದಿರುವುದಾಗಿ, ಪೊಲೀಸರಿಗೆ ನೀಡಿದ್ದ ದೂರಿನಲ್ಲಿ ಮತ್ತು ನ್ಯಾಯಾಧೀಶರೆದುರು ನೀಡಿದ್ದ ಹೇಳಿಕೆಯಲ್ಲಿ ಸಂತ್ರಸ್ತೆ ತಿಳಿಸಿದ್ದರು. ಈ ನಿಟ್ಟಿನಲ್ಲಿ, ಪ್ರಕರಣವನ್ನು ಬೆಂಗಳೂರು ಸಿಟಿ ಸಿವಿಲ್ ನ್ಯಾಯಾಲಯಕ್ಕೆ ವರ್ಗಾಯಿಸುವಂತೆಯೂ ಪೊಲೀಸರು ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು. ಅರ್ಜಿಯನ್ನು ಮಾನ್ಯ ಮಾಡಿರುವ ಪುತ್ತೂರು ನ್ಯಾಯಾಲಯ, ಪ್ರಕರಣವನ್ನು ಮುಂದಿನ ವಿಚಾರಣೆಗಾಗಿ ಬೆಂಗಳೂರು ಸಿವಿಲ್ ನ್ಯಾಯಾಲಯಕ್ಕೆ ವರ್ಗಾಯಿಸಿ ಆದೇಶ ಹೊರಡಿಸಿದೆ.
ತನ್ನ ವಿರುದ್ಧ ದಾಖಲಾಗಿದ್ದ ಪ್ರಕರಣದಲ್ಲಿ ಆರುಣ್ ಕುಮಾರ್ ಪುತ್ತಿಲ ಈಗಾಗಲೇ ಪುತ್ತೂರು ನ್ಯಾಯಾಲಯದಿಂದ ಜಾಮೀನು ಪಡೆದುಕೊಂಡಿದ್ದಾರೆ.