✒️ರಾಧಾಕೃಷ್ಣ ಎರುಂಬು
ಪುರಾಣದ ಏಕಚಕ್ರಪುರ ಇಂದು ದಕ್ಷಿಣ ಕನ್ನಡ ಜಿಲ್ಲೆಯ ವಿಟ್ಲ. ಸೀಮೆಯ ಜನರಿಗೆ, ಪಾಂಡವರು ಪಾದಗಳಿಟ್ಟು ಮೆರೆದ ಮಣ್ಣಿನಲ್ಲಿ ರೂಪಿಸಿದ ಬೃಹತ್ ದೇವಾಲಯವೆಂಬುದರಲ್ಲಿ ಹೆಮ್ಮೆಯಿದೆ.
ಪಂಚಲಿಂಗ ಮಾತ ಪಿತೃ ಸ್ವರೂಪಿ, ನಂಬಿದವರ ಬೆಂಬಿಡದೆ ಕಾವ ಕಲ್ಪವೃಕ್ಷ ಎಂದು ಬಾವುಕರಾಗಿ ಸಮರ್ಪಿಸುವ ತನು ಮನ ಧನ ಬೆಳೆಗಳ ಕಾಣಿಕೆ.
ಬ್ರಹ್ಮಕಲಶ ಕಳೆದು ವರ್ಷ 12 ಸರಿದರೂ ಮಾಸದ ನೆನಪದು ಹಚ್ಚಹಸುರು. ಗಜಪ್ರಷ್ಠಾಕೃತಿಯ ದೇವಾಲಯದ ವಿಶಾಲತೆ, ಸದಾ ಜಲಾವೃತವಾದ ಪುಷ್ಕರಣಿ ಎಲ್ಲೂ ಕಾಣದ ಸೊಗಸನ್ನು ತರುತ್ತಾ ಆಸ್ತಿಕರಲ್ಲಿ ಭಕ್ತಿ ಇಮ್ಮಡಿಸುತ್ತದೆ.
ಮಲರಾಯ, ಮೂಡಲತ್ತಾಯ ದೈವಗಳು ರಕ್ಷಕರಾಗಿದ್ದುಕೊಂಡ ಉಳ್ಳಾಲ್ತಿಪಂಚಲಿಂಗೇಶ್ವರನ 9 ದಿನಗಳ ಜಾತ್ರಾ ಸಂಭ್ರಮ. ವೈದಿಕ, ಧಾರ್ಮಿಕ, ಸಾಂಸ್ಕೃತಿಕ ಸೇವೆಗಳ ಹರಿಕಾರ ಪಂಚಲಿಂಗನ ಉತ್ಸವಕ್ಕಿಂದು (ಜನವರಿ 14) ಆರಂಬೊತ್ಸವ.
ಕಳೆದ ಸಂಕ್ರಮಣ ದಿಂದ ಈ ಸಂಕ್ರಾಂತಿ ವರೆಗೂ ಧನುರ್ಮಾಸದ ಧನುಪೂಜೆ ಸ್ವೀಕರಿಸಿದ ಪಂಚಲಿಂಗನಿಗೆ ಇಂದಿನಿಂದ ಆಯಾನೋತ್ಸವ.
16 ಸೀಮೆಗಳ ಅಥವಾ ಎರಡೂರ, ವಿಟ್ಲ ಅರಸು ಸಿಂಹಾಸನಕ್ಕೆ ಒಳಪಟ್ಟಿದ ಕೃಷಿ ಭೂಮಿಯವರು ಬೆಳೆ ಕಾಣಿಕೆಯ ಸಮರ್ಪಣೆಯಿಂದ ಧ್ವಜ ಪೀಠದ ಸಿಂಗಾರ. ಊರ ಹತ್ತು ಸಮಸ್ತರ ಸಮಕ್ಷಮದಲ್ಲಿ ವಿಟ್ಲ ಅರಮನೆಯ ಅರಸರು ಹಾಗೂ ಅರಸುಮನೆತನದವರ ನೇತೃತ್ವದಲ್ಲಿ ಬೆಳಗ್ಗೆಯಿಂದ ಧ್ವಜಾರೋಹಣದ ಸಂಭ್ರಮ.
ಪ್ರತಿ ವರ್ಷವೂ ಮಕರ ಸಂಕ್ರಮಣಕ್ಕೆ ಈ ಸಂಭ್ರಮವೆಂದರೆ ನಂಬಿದ ಭಕ್ತರ ಬೆಳವಣಿಗೆಗೆ ಪೂರಕ ಅನುಗ್ರಹವೇ ಸರಿ. ಹಿಂದೆ ಗೊನೆ ಮುಹೂರ್ತವಿತ್ತೋ ಇಲ್ಲವೋ ಎನ್ನುವುದಕ್ಕಿಂತಲೂ “ನೇಲ್ಯದೊಂಪ” ದ ಮುಹೂರ್ತ ಧನುಮಾಸದ 18ನೇ ದಿನ ನಡೆಯುತ್ತಿತ್ತು ಎನ್ನುವುದು ಐತಿಹ್ಯ.
ಇಂದು ಧ್ವಜಾರೋಹಣದ ಬಳಿಕ ಸಂಜೆ 5ಗಂಟೆಗೆ ಚಂದ್ರನಾಥ ಬಸದಿಯಿಂದ ಸಾಂಕೇತಿಕ ಉಲ್ಪೆ ಮೆರವಣಿಗೆ, ಹೊರೆ ಕಾಣಿಕೆ ವಿವಿಧ ಭಜನಾ ತಂಡಗಳ ಸಹಿತ ದೇವಾಲಯಕ್ಕೆ ಆಗಮಿಸುವುದು. 6ಗಂಟೆಗೆ ಮೂಡಲತ್ತಾಯ ದೈವದ ಭಂಡಾರ ಬರುವುದು ಬಳಿಕ ಲಕ್ಷದೀಪ, ದೇವರ ಬಲಿಉತ್ಸವ ಹಾಗೂ ಕಟ್ಟೆಪೂಜೆ, ಬಟ್ಟಲು ಕಾಣಿಕೆ ಜರಗುತ್ತದೆ.
ಎಲ್ಲಾ ದೇವಾಲಯಗಳಲ್ಲಿ ದೀಪಾವಳಿಗೆ ಲಕ್ಷದೀಪ ಜರಗಿದರೆ ವಿಟ್ಲ ಶ್ರೀ ಪಂಚಲಿಂಗೇಶ್ವರನಿಗೆ ಮಕರ ಸಂಕ್ರಮಣದಂದು ಲಕ್ಷದೀಪ. ಶಬರಿಮಲೆಯಲ್ಲಿ ಜ್ಯೋತಿಸ್ವರೂಪ ಹೇಗಿದೆ ಪವಾಡ? ಹಿಂದಿನ ಕಾಲಕ್ಕೆ ವಿಟ್ಲ ಸೀಮೆಯಲ್ಲಿ ವಿವಾಹಿತರಾದ ನೂತನ ವಧುವರರು ಸಂಭ್ರಮದಿಂದ ಕಾಣುವ ಈ ಲಕ್ಷದೀಪೋತ್ಸವದಿಂದ ಪಂಚಲಿಂಗ ಅವರ ಇಷ್ಟಾರ್ಥ ಸಿದ್ದಿಸುತ್ತಾನೆ ಎಂಬ ನಂಬಿಕೆ ಇನ್ನೂ ಹಸಿರೇ.
ಬಳಿಕ ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ “ನೃತ್ಯೋಹಂ” ಭರತ ನಾಟ್ಯ ಹಾಗೂ “ಒರಿಯೆ” ನಾಟಕ ಕಾರ್ಯಕ್ರಮ ನಡೆಯುತ್ತದೆ. ಮುಂದಿನ 3 ದಿನಗಳು ದೇವರ ನಿತ್ಯ ಉತ್ಸವಗಳು ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ಜರಗುತ್ತವೆ. ನೀವು ನಾವೆಲ್ಲರೂ ಜೊತೆಯಾಗಿ ಸಂಭ್ರಮಿಸಿ ದೇವರ ಕೃಪೆಗೆ ಪಾತ್ರರಾಗೋಣ.