ಪುತ್ತೂರು : ಪುತ್ತೂರು ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯಲ್ಲಿ 10ನೇ ತರಗತಿಯ ವಿದ್ಯಾರ್ಥಿಯಾದ ಲಕ್ಷ್ಮಿ ಅರ್ಪಣ್ ರವರು ಎರಡು ವರ್ಷಕ್ಕಿಂತ ಮುಂಚೆ “ಮೇಲೊಬ್ಬ ಮಾಯಾವಿ” ಚಲನಚಿತ್ರದಲ್ಲಿ ಸಂಚಾರಿ ವಿಜಯ್ ಅವರ ಜೊತೆ ನಟನೆ ಮಾಡಿದ್ದು, ಈ ಚಲನಚಿತ್ರವನ್ನು ಭರತ್ ಪುತ್ತೂರು ಇವರು ನಿರ್ಮಾಣ ಮಾಡಿದ್ದರು ಹಾಗೂ ನವೀನ್ ಕೃಷ್ಣ ಇವರು ನಿರ್ದೇಶನ ಮಾಡಿದ್ದರು. ಈ ಚಿತ್ರದಲ್ಲಿ ವಿಲನ್ ಪಾತ್ರವನ್ನು ಚಕ್ರವರ್ತಿ ಚಂದ್ರಚೂಡ್ ರವರು ನಟನೆ ಮಾಡಿದ್ದಾರೆ. ಮೇಲೊಬ್ಬ ಮಾಯಾವಿ ಚಿತ್ರದಲ್ಲಿ ನಾಯಕ ನಟ ಸಂಚಾರಿ ವಿಜಯ್ ಅವರು ‘ಇರುವೆ’ ಪಾತ್ರದಲ್ಲಿ ಅಭಿನಯಿಸಿದ್ದು, ನಾಯಕಿ ನಟಿ ಅನನ್ಯ ಶೆಟ್ಟಿ ಅವರು ‘ಸಕ್ಕರೆ’ ಪಾತ್ರದಲ್ಲಿ ಹಾಗೂ ನಾಯಕಿಯ ತಮ್ಮನ ಪಾತ್ರದಲ್ಲಿ “ಕಿವಿ” ಎಂಬ ಹೆಸರಿನಲ್ಲಿ ಲಕ್ಷ್ಮಿ ಅರ್ಪಣ್ ನಟನೆ ಮಾಡಿದ್ದಾರೆ.
ಇದೀಗ ವಿಜಯ್ ಅವರ ಅಕಾಲಿಕ ಸಾವಿಂದಾಗಿ ನೊಂದಿರುವ ಇವರು ವಿಜಯ್ ಅವರ ಜತೆಗಿನ ಬಾಂಧವ್ಯವನ್ನು ಬರವಣಿಗೆ ಮೂಲಕ ಬಿತ್ತರಿಸಿದ್ದಾರೆ-” ಚಲನಚಿತ್ರದ ಮೂಲಕ ನಾನು ವಿಜಯ್ ಅವರಿಗೆ ಪರಿಚಯವಾದೆ, ಮೇಲೊಬ್ಬ ಮಾಯಾವಿ ಚಿತ್ರೀಕರಣದ ವೇಳೆ ಅವರು ನನ್ನನ್ನು ಸ್ವಂತ ತಮ್ಮನ ಹಾಗೇ ನೋಡಿಕೊಳ್ಳುತ್ತಿದ್ದರು. ಚಿತ್ರೀಕರಣ ವೇಳೆ ನಟನೆಯ ಬಗ್ಗೆ ಸಾಕಷ್ಟು ವಿಷಯಗಳನ್ನು ನನಗೆ ಹೇಳಿಕೊಡುತ್ತಿದ್ದರು. “ನಟನೆ ಎಂಬುದು ಕೇವಲ ನಟನೆ ಆಗಬಾರದು ನಮ್ಮ ನಟನೆಯ ಪಾತ್ರವು ಪ್ರೇಕ್ಷಕರ ಮನಸ್ಸಿಗೆ ಮುಟ್ಟುವಂತಿರಬೇಕು”. ಆವಾಗ ಮಾತ್ರ ನಮ್ಮ ನಟನೆಗೆ ಸಾರ್ಥಕವಾಗುತ್ತದೆ ಎನ್ನುವ ಈ ಅದ್ಭುತ ಮಾತನ್ನು ನನಗೆ ಚಿತ್ರೀಕರಣದ ಪ್ರಾರಂಭದಲ್ಲಿಯೇ ಹೇಳಿದ್ದರು. ವಿಜಯ್ ಸರ್ ನ ಈ ಮಾತನ್ನು ನಾನು ಪೂರ್ತಿ ಚಿತ್ರೀಕರಣದ ಸಮಯದಲ್ಲಿ ಪಾಲನೆ ಮಾಡಿದ್ದೇನೆ. 2 ತಿಂಗಳುಗಳ ಕಾಲ ರಾತ್ರಿ ಹಗಲು ನಾವು ಜೊತೆಯಲ್ಲಿಯೇ ನಟನೆ ಮಾಡಿದ್ದೇವೆ ಪ್ರತಿ ಶೂಟಿಂಗ್ ನಲ್ಲಿಯೂ ನನಗೆ ಅವರು ಒಳ್ಳೆಯ ಆದರ್ಶದ ಮಾತುಗಳನ್ನು ಹೇಳುತ್ತಿದ್ದರು. ನನ್ನ ತಪ್ಪನ್ನು ತಿದ್ದಿ ಸರಿ ಪಡಿಸುತ್ತಿದ್ದರು. ಈ ಅವರ ಒಳ್ಳೆಯ ಗುಣ ನನಗೆ ತುಂಬಾ ಖುಷಿ ಕೊಡುತ್ತಿತ್ತು. ಶೂಟಿಂಗ್ ಸೆಟ್ ನಲ್ಲಿ ಜೊತೆಯಲ್ಲಿಯೇ ನಾವು ಟೀ ಕುಡಿಯುತ್ತಿದ್ದೆವು, ಊಟ ಮಾಡುತ್ತಿದ್ದೆವು. ನನ್ನ ಮೇಲೆ ತುಂಬಾ ಕಾಳಜಿಯನ್ನು ವಹಿಸುತ್ತಿದ್ದರು. ರಾತ್ರಿ ವೇಳೆ ಶೂಟಿಂಗ್ ನಡೆಯುತ್ತಿರುವಾಗ ನಾನು ನಿದ್ದೆ ಮಾಡುತ್ತಿದ್ದರೆ, ನನ್ನನ್ನು ಎಬ್ಬಿಸಿ ಬಾ ಎಂದು ಕರೆದುಕೊಂಡು ಹೋಗುತ್ತಿದ್ದರು. ನನಗೆ ಅವರೆಂದರೆ ತುಂಬಾ ಪ್ರೀತಿ ಒಂದೇ ಟೇಕ್ ನಲ್ಲಿ ನನ್ನ ನಟನೆ ಸರಿ ಆಗುತ್ತಿದ್ದಕ್ಕೆ ಅವರಿಗೆ ತುಂಬಾ ಸಂತೋಷ ಆಗುತಿತ್ತು. ನನ್ನನ್ನು ಪ್ರೀತಿಯಿಂದ ಅಪ್ಪಿಕೊಳ್ಳುತ್ತಿದ್ದರು. ಅವರು ಯಾವಾಗಲೂ ಯಾರಿಗೂ ಬೇಸರವಾಗುವಂತಹ ಮಾತುಗಳನ್ನು ಯಾವತ್ತೂ ಆಡುತ್ತಿರಲಿಲ್ಲ ಚಿತ್ರ ತಂಡದಲ್ಲಿ ನಾವೆಲ್ಲರೂ ಜೊತೆಯಾಗಿಯೇ ಸಂತೋಷದಿಂದ ಇರುತ್ತಿದ್ದೆವು.
ನಮ್ಮ ಚಿತ್ರದ ಹಾಡು ಬೆಂಗಳೂರಿನಲ್ಲಿ ಬಿಡುಗಡೆ ಆಗುವ ಸಂದರ್ಭದಲ್ಲಿ ವೇದಿಕೆಯಲ್ಲಿ ನನ್ನನ್ನು ಅವರ ಬಳಿಗೆ ಕರೆದುಕೊಂಡು ಅವರ ಜೊತೆಯಲ್ಲಿ ನಿಲ್ಲಿಸುತ್ತಿದ್ದರು. ನಮ್ಮ ಚಿತ್ರ ‘ಮೇಲೊಬ್ಬ ಮಾಯಾವಿ’ ಮೇ ತಿಂಗಳಲ್ಲಿ ರಿಲೀಸ್ ಆಗುವಂತೆ ಡೈರೆಕ್ಟರ್ ಹಾಗೂ ಪ್ರೊಡ್ಯೂಸರ್ ರವರು ತೀರ್ಮಾನಿಸಿದ್ದರು. ಆದರೇ ಕೊರೊನಾದ ಎರಡನೇ ಅಲೆ ಬಂದ ಕಾರಣ ಚಿತ್ರವನ್ನು ಬಿಡುಗಡೆ ಮಾಡಲು ಸಾಧ್ಯವಾಗಲಿಲ್ಲ, ‘ಮೇಲೊಬ್ಬ ಮಾಯಾವಿ’ ಚಲನಚಿತ್ರದಲ್ಲಿ ಎಲ್. ಎನ್ ಶಾಸ್ತ್ರೀಯವರು ಹಾಡಿದ್ದು, ಅವರ ಕೊನೆಯ ಹಾಡು ‘ಕೈಯ ಕೊಳಲು ಹಿಡಿದವನೊಬ್ಬ ಗೋಪಾಲ’ ಎಂಬ ಹಾಡು ಈಗ ನೆನೆಸುವಾಗ ಮನಸ್ಸಿಗೆ ತುಂಬಾ ಬೇಸರವಾಗುತ್ತದೆ. ವಿಜಯ್ ಸರ್ ಇಲ್ಲ ಎಂದು ನೆನೆಸಿಕೊಳ್ಳಲು ಕೂಡ ನನಗೆ ಸಾಧ್ಯವಾಗುತ್ತಿಲ್ಲ, “ಕಲೆ ಉಳಿದಿದೆ ಕಲಾವಿದ ಉಳಿಯಲಿಲ್ಲ, ಸಾಧನೆ ಉಳಿದಿದೆ ಸಾಧಕ ಉಳಿಯಲಿಲ್ಲ, ಪ್ರಶಸ್ತಿ ಉಳಿದಿದೆ ಪ್ರಶಸ್ತಿ ವಿಜೇತ ಉಳಿಯಲಿಲ್ಲ” ಎಂದು ಹೇಳಿದ್ದಾರೆ.
“ಕಲೆ ಉಳಿದಿದೆ ಕಲಾವಿದ ಉಳಿಯಲಿಲ್ಲ, ಸಾಧನೆ ಉಳಿದಿದೆ ಸಾಧಕ ಉಳಿಯಲಿಲ್ಲ, ಪ್ರಶಸ್ತಿ ಉಳಿದಿದೆ ಪ್ರಶಸ್ತಿ ವಿಜೇತ ಉಳಿಯಲಿಲ್ಲ”