ಪುತ್ತೂರು : ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೋವಿಡ್-19 ಸೋಂಕು ಹರಡುವಿಕೆಯನ್ನು ಪರಿಣಾಮಕಾರಿಯಾಗಿ ನಿಯಂತ್ರಿಸಲು ಸರ್ಕಾರದ ನಿರ್ದೇಶನದಂತೆ ಜಿಲ್ಲಾಡಳಿತವು ಎಲ್ಲಾ ಅವಶ್ಯಕ ಕ್ರಮಗಳನ್ನು ಕೈಗೊಳ್ಳುತ್ತಿದ್ದು, ಕಟ್ಟುನಿಟ್ಟಿನ ನಿರ್ಬಂಧಗಳ ಪರಿಣಾಮಕಾರಿ ಅನುಷ್ಠಾನದಿಂದಾಗಿ ಕೋವಿಡ್ ಪ್ರಕರಣಗಳ ಸಂಖ್ಯೆಯಲ್ಲಿ ಇಳಿಕೆಯಾಗಿದ್ದರೂ ಸಕ್ರಿಯ ಕೋವಿಡ್ ಪ್ರಕರಣಗಳು ಹೆಚ್ಚಾಗಿರುವುದರಿಂದ, ಈ ಸಾಂಕ್ರಾಮಿಕ ರೋಗವನ್ನು ಸಂಪೂರ್ಣವಾಗಿ ನಿಯಂತ್ರಿಸಲು ಜಾರಿಯಲ್ಲಿರುವ ಮಾರ್ಗಸೂಚಿಗಳನ್ನು ಮುಂದುವರೆಸಿ ದ.ಕ. ಜಿಲ್ಲಾಧಿಕಾರಿ ಡಾ.ಕೆ.ವಿ. ರಾಜೇಂದ್ರ ರವರು ಆದೇಶಿಸಿದ್ದಾರೆ.
ಪ್ರಸ್ತುತ ಜಿಲ್ಲೆಯಲ್ಲಿ ಜಾರಿಯಲ್ಲಿರುವ ಕೋವಿಡ್-19 ಮಾರ್ಗಸೂಚಿಗಳನ್ವಯ ದೇವಸ್ಥಾನ, ಚರ್ಚ್ ಹಾಗೂ ಮಸೀದಿಗಳೂ ಒಳಗೊಂಡಂತೆ ಜಿಲ್ಲೆಯ ಎಲ್ಲಾ ಧಾರ್ಮಿಕ ಕೇಂದ್ರಗಳಿಗೆ ಸಾರ್ವಜನಿಕ ಪ್ರವೇಶವನ್ನು ಕಟ್ಟುನಿಟ್ಟಾಗಿ ನಿರ್ಬಂಧಿಸಲಾಗಿರುತ್ತದೆ. ಆದೇಶವನ್ನು ಉಲ್ಲಂಘಿಸಿ ಯಾವುದೇ ವ್ಯಕ್ತಿಗಳು ಧರ್ಮಸ್ಥಳ, ಸುಬ್ರಹ್ಮಣ್ಯ ಸೇರಿದಂತೆ ಯಾವುದೇ ಧಾರ್ಮಿಕ ಕೇಂದ್ರಗಳಿಗೆ ಭೇಟಿ ನೀಡಿದ್ದಲ್ಲಿ ಅಂತಹ ವ್ಯಕ್ತಿಗಳು ಸಂಚಾರಕ್ಕೆ ಬಳಸುವ ವಾಹನವನ್ನು ಮುಟ್ಟುಗೋಲು ಹಾಕಲಾಗುವುದು. ಯಾವುದೇ ಧಾರ್ಮಿಕ ಕೇಂದ್ರಗಳು ಸಾರ್ವಜನಿಕರ ಪ್ರವೇಶಕ್ಕೆ ಹಾಗೂ ವಸತಿಗೆ ಅವಕಾಶ ನೀಡಿದ್ದಲ್ಲಿ ಅಂತಹ ಧಾರ್ಮಿಕ ಕೇಂದ್ರಗಳ ಆಡಳಿತಾಧಿಕಾರಿಗಳ ವಿರುದ್ಧ ಕ್ರಮವಹಿಸಲಾಗುವುದು. ಯಾವುದೇ ಧಾರ್ಮಿಕ ಕೇಂದ್ರಗಳಿಗೆ ಭೇಟಿ ನೀಡಿದ ಸಾರ್ವಜನಿಕರು ಹಾಗೂ ಧಾರ್ಮಿಕ ಕೇಂದ್ರಗಳ ವಿರುದ್ದ ಕರ್ನಾಟಕ ಸಾಂಕ್ರಾಮಿಕ ರೋಗಗಳ ಅಧಿನಿಯಮ 2021 ಕಲಂ 5(3), 6(1) (2) ರನ್ವಯ ಮತ್ತು ವಿಪತ್ತು ನಿರ್ವಹಣಾ ಕಾಯ್ದೆ 2005 ರ ಕಲಂ 51, 58 ರನ್ವಯ ಕಾನೂನು ರೀತ್ಯಾ ಕ್ರಮ ಜರುಗಿಸಲಾಗುವುದು. ಜಿಲ್ಲೆಯಲ್ಲಿ ಕೋವಿಡ್-19 ಎರಡನೇ ಅಲೆಯಿಂದಾಗಿ ಸ್ಥಗಿತಗೊಂಡಿರುವ ಚಟುವಟಿಕೆಗಳನ್ನು ಪುನರಾರಂಭಿಸಲು, ಕೋವಿಡ್ ಪಾಸಿಟಿವಿಟಿ ದರವನ್ನು ಕಡಿಮೆಗೊಳಿಸುವುದು ಹಾಗೂ ಜಿಲ್ಲೆಯನ್ನು ಕೋವಿಡ್ ಮುಕ್ತವನ್ನಾಗಿಸುವುದು ಅತೀ ಅಗತ್ಯವಾಗಿದ್ದು, ಈ ನಿಟ್ಟಿನಲ್ಲಿ ಸಾರ್ವಜನಿಕರು, ಸರ್ಕಾರದ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಪಾಲಿಸಿಕೊಂಡು, ಜಿಲ್ಲಾಡಳಿತದೊಂದಿಗೆ ಸಹಕರಿಸುವಂತೆ ಜಿಲ್ಲಾಧಿಕಾರಿ ಆದೇಶದಲ್ಲಿ ತಿಳಿಸಿದ್ದಾರೆ.