ಬೆಂಗಳೂರು : ಕರ್ನಾಟಕದಲ್ಲಿ ಜುಲೈ 15 ರಿಂದ ಪಿಯು ಶೈಕ್ಷಣಿಕ ವರ್ಷ ಆರಂಭವಾಗಲಿದ್ದು, ಮೊದಲ ಹಂತದಲ್ಲಿ ಆನ್‌ಲೈನ್ ಮೂಲಕ ತರಗತಿಗಳನ್ನು ಪ್ರಾರಂಭಿಸಲು ಪದವಿ ಪೂರ್ವ ಶಿಕ್ಷಣ ಇಲಾಖೆ ನಿರ್ಧರಿಸಿದೆ.
ರಾಜ್ಯದಲ್ಲಿ ಕೊರೊನಾ ಸೋಂಕು ಇಳಿಕೆಯಾಗುತ್ತಿರುವ ಹಿನ್ನೆಲೆಯಲ್ಲಿ ಜುಲೈ 15 ರಿಂದ ಆನ್ ಲೈನ್ ತರಗತಿಗಳು ಪ್ರಾರಂಭ ಮಾಡಲು ನಿರ್ಧರಿಸಲಾಗಿದ್ದು, ಭೌತಿಕ ತರಗತಿ ಆರಂಭ ವಿಚಾರವಾಗಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದ್ದು, ಜುಲೈ ಅಂತ್ಯದ ವೇಳೆಗೆ ಭೌತಿಕ ತರಗತಿಗಳು ಆರಂಭವಾಗುವ ಸಾಧ್ಯತೆ ಇದೆ ಎನ್ನಲಾಗಿದೆ.
ಇನ್ನು ಮಕ್ಕಳ ಆರೋಗ್ಯದ ಹಿತದೃಷ್ಟಿಯಿಂದ ನಡೆಯಬೇಕಿದ್ದ ಪಿಯು ಪರೀಕ್ಷೆಯನ್ನು ಸರ್ಕಾರ ರದ್ದುಗೊಳಿಸಿದ್ದು, ಎಸ್‌ಎಸ್‌ಎಲ್ ಸಿ ಮತ್ತು ಪ್ರಥಮ ಪಿಯು ಅಂಕಗಳನ್ನು ಅವಲೋಕಿಸಿ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೆ ಅಂಕವನ್ನು ನೀಡಲು ನಿರ್ಧರಿಸಲಾಗಿದೆ.
ಪ್ರಥಮ ಪಿಯುಸಿ ಪಾಸಾದ ವಿದ್ಯಾರ್ಥಿಗಳಿಗೆ ಮೊದಲು ಆನ್‌ಲೈನ್ ಮೂಲಕ ಶಿಕ್ಷಣ ನೀಡಲಾಗುವುದು. ಕೊರೊನಾ ಸ್ಥಿತಿಗತಿ ನೋಡಿಕೊಂಡು ಭೌತಿಕ ತರಗತಿಗಳ ಪ್ರಾರಂಭಕ್ಕೆ ಚಿಂತನೆ ನಡೆಸಲಾಗುವುದು ಎಂದು ವರದಿಯಾಗಿದೆ.