ಪಾಣಾಜೆ: ಸುಮಾರು 20 ವರ್ಷದಿಂದ ಆರ್ಲಪದವಿನಲ್ಲಿ ಎಲ್ಲರ ಪ್ರೀತಿಗೆ ಪಾತ್ರವಾಗಿದ್ದ ಕಬೀರ ಎನ್ನುವ ಬಸವ ಇಂದು ಅಸುನೀಗಿತು.
ಪಾಣಾಜೆಯ ವ್ಯಾಪಾರಿಗಳು ಮತ್ತು ಜನತೆ ನೀಡುತ್ತಿದ್ದ ಆಹಾರ, ನೀರು ಸೇವಿಸುತ್ತಾ ತಾನಾಯ್ತು ತನ್ನ ಜೀವನವಾಯ್ತು ಎಂಬಂತೆ ಆದರ್ಶ ಬದುಕು ಸಾಗಿಸಿದ ಕಬೀರನ ನಡೆ ಮಾತ್ರ ಘನ ಗಂಭೀರ.. ತಾನೊಬ್ಬ ರಾಜನಂತೆ ಬದುಕುತ್ತಿತ್ತು. ಒಂದು ಸಲ ಅದರ ಕಾಲಿಗೆ ಗಾಯವಾಗಿ ನಡೆದಾಡಲು ಕಷ್ಟವಾದ ಸಮಯದಲ್ಲಿ ಪಶುವೈದ್ಯರಾದ ದಿವಂಗತ ಪ್ರಭಾಕರ ನಾಯಕ್ ರವರ ಉಚಿತ ಆರೈಕೆಯಿಂದ ಚೇತರಿಸಿಕೊಂಡಿತು.
ಮೈಲುಗಟ್ಟಲೆ ಸವಾರಿ:
ಕಬೀರನ ಬಹಳ ವಿಶೇಷತೆಯೆಂದರೆ ಇದಕ್ಕೆ ಮನಸ್ಸಾದಾಗ ಒಮ್ಮೆ ಆರ್ಲಪದವಿನಿಂದ ಹೊರಟರೆ ಸುಮಾರು 15 ಕಿ.ಮೀ. ದೂರದ ಸಂಟ್ಯಾರ್ ವರೆಗೆ ಗಾಂಭೀರ್ಯತೆಯ ಹೆಜ್ಜೆ ಹಾಕುತ್ತಾ ಹೋಗುತ್ತಿತ್ತು. ತಿರುಗಿ ಅಲ್ಲಿಂದ ಆರ್ಲಪದವು ಆಗಿ ಸೂರಂಬೈಲು ರವರೆಗೂ ನಡೆದು ಹೋಗುತ್ತಿತ್ತು. ಆದರೆ ಬೀದಿಯ ಇತರ ಪ್ರಾಣಿಗಳಿಗೆ ಯಾವುದೇ ತೊಂದರೆ ನೀಡಿದ ಘಟನೆಯೇ ಇಲ್ಲ..
ಇತ್ತೀಚೆಗೆ ವಯೋಸಹಜತೆಯಿಂದ ಸ್ವಲ್ಪಸಮಯದಿಂದ ಅನಾರೋಗ್ಯಕ್ಕೆ ತುತ್ತಾಗಿ ಇಂದು ಮುಂಜಾನೆ ನಿಧನವಾಯಿತು.
ಊರಿನವರ ಸಹಕಾರದ ಜೊತೆ ಜೆ.ಸಿ.ಬಿ ಮೂಲಕ ಹೊಂಡ ತೆಗೆದು ಹಿಂದೂ ಸಂಸ್ಕೃತಿಯ ವಿಧಿವಿಧಾನಗಳೊಂದಿಗೆ ಬಸವನನ್ನು ದಫನ ಮಾಡಲಾಯಿತು.