ಉಪ್ಪಿನಂಗಡಿ: ಅಕ್ರಮವಾಗಿ ಕೆಂಪು ಕಲ್ಲು ಸಾಗಾಟದ ಪ್ರಕರಣವೊಂದನ್ನು ಉಪ್ಪಿನಂಗಡಿ ಪೊಲೀಸರು ಪತ್ತೆ ಹಚ್ಚಿ ಕೇಸು ದಾಖಲಿಸಿಕೊಂಡಿದ್ದಾರೆ.
ಉಪ್ಪಿನಂಗಡಿ ಪೊಲೀಸ್ ಠಾಣಾ ಉಪನಿರೀಕ್ಷಕ ಸುತೇಶ್ ಕೆ.ಪಿ. ಅವರು ರೌಂಡ್ಸ್ ಕರ್ತವ್ಯದಲ್ಲಿದ್ದಾಗ 34 ನೆಕ್ಕಿಲಾಡಿ ಗ್ರಾಮದ ಬೊಳ್ಳಾರ್ ಎಂಬಲ್ಲಿ ಮಂಗಳೂರು ಕಡೆಯಿಂದ ಉಪ್ಪಿನಂಗಡಿ ಕಡೆಗೆ ಬರುತ್ತಿದ್ದ ಟಿಪ್ಪರ್ ಲಾರಿ (ನೋಂದಣಿ ಸಂಖ್ಯೆ: ಕೆಎ. 21.ಡಿ.0846) ಯನ್ನು ತಡೆದು ನಿಲ್ಲಿಸಿದ್ದು, ಈ ಸಂದರ್ಭ ಸ್ವಲ್ಪ ದೂರ ಹೋಗಿ ಲಾರಿಯನ್ನು ನಿಲ್ಲಿಸಿದ ಲಾರಿ ಚಾಲಕ ಲಾರಿಯ ಕೀ ಹಾಗೂ ದಾಖಲೆಪತ್ರದೊಂದಿಗೆ ಪರಾರಿಯಾಗಿದ್ದನು.
ಬಳಿಕ ಪೊಲೀಸರು ಪರಿಶೀಲಿಸಿದಾಗ ಲಾರಿಯ ಚಾಲಕನು ಎಲ್ಲಿಂದಲೋ ಕೆಂಪು ಕಲ್ಲನ್ನು ಗಣಿ ಮತ್ತು ಭೂ ವಿಜ್ಞಾನ ಇಲಾಖೆಗೆ ಸಂಬಂಧಿಸಿದಂತೆ ಮಾನದಂಡಗಳನ್ನು ಪಾಲನೇ ಮಾಡದೇ ಕಳ್ಳತನ ಮಾಡುತ್ತಿದ್ದದ್ದು ತಿಳಿದು ಬಂತು. ಪ್ರಕರಣ ದಾಖಲಿಸಿಕೊಂಡ ಉಪ್ಪಿನಂಗಡಿ ಪೊಲೀಸರು 10 ಸಾವಿರ ರೂ. ಮೌಲ್ಯದ 250 ಕೆಂಪು ಕಲ್ಲು ಹಾಗೂ 12 ಲಕ್ಷರೂ. ಮೌಲ್ಯದ ಲಾರಿಯನ್ನು ಸ್ವಾಧೀನ ಪಡಿಸಿಕೊಂಡಿದ್ದಾರೆ.

























