ನವದೆಹಲಿ: ಪರೀಕ್ಷಾ ಅಕ್ರಮ ಹಾಗೂ ಪ್ರಶ್ನೆಪತ್ರಿಕೆ ಸೋರಿಕೆಯಲ್ಲಿ ಭಾಗಿಯಾದ ಅಪರಾಧಿಗಳಿಗೆ ತ್ವರಿತವಾಗಿ ವಿಚಾರಣೆ ನಡೆಸಿ ಶಿಕ್ಷೆ ವಿಧಿಸಲು ಫಾಸ್ಟ್-ಟ್ರ್ಯಾಕ್ ಕೋರ್ಟ್ ಸ್ಥಾಪಿಸುವುದಾಗಿ ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ದೇಶಾದ್ಯಂತ ನೀಟ್’ (NEET) ಪರೀಕ್ಷೆಯ ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣ ಹಾಗೂ ಜಂತರ್ ಮಂತರ್‌ನಲ್ಲಿ ವಿದ್ಯಾರ್ಥಿಗಳ ಪ್ರತಿಭಟನೆ ತೀವ್ರಗೊಳ್ಳುತ್ತಿರುವ ಬೆನ್ನಲ್ಲೇ ಮೋದಿ ಅವರು ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದಾರೆ.
ಪೋಸ್ಟ್‌ನಲ್ಲಿ ಏನಿದೆ?
ನಮ್ಮ ಯುವಜನತೆಯ ಭವಿಷ್ಯ ಮತ್ತು ಕ್ಷೇಮಾಭಿವೃದ್ಧಿಗಿಂತ ನಮಗೆ ಬೇರೇನೂ ಮುಖ್ಯವಲ್ಲ. ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣಗಳಲ್ಲಿ ಭಾಗಿಯಾದವರಿಗೆ ಅತ್ಯಂತ ವೇಗವಾಗಿ ಮತ್ತು ಕಠಿಣವಾದ ಶಿಕ್ಷೆ ಸಿಗುವಂತೆ ಮಾಡಲು ‘ಫಾಸ್ಟ್-ಟ್ರ್ಯಾಕ್’ ನ್ಯಾಯಾಲಯಗಳನ್ನು ಸ್ಥಾಪಿಸಲು ನಿರ್ಧರಿಸಲಾಗಿದೆ.
ಈ ನಿಟ್ಟಿನಲ್ಲಿ ಅಗತ್ಯವಿರುವ ಎಲ್ಲಾ ಕಾನೂನು ಮತ್ತು ಆಡಳಿತಾತ್ಮಕ ಕ್ರಮಗಳನ್ನು ತಕ್ಷಣವೇ ಕೈಗೊಳ್ಳುವಂತೆ ಸಂಬಂಧಪಟ್ಟ ಇಲಾಖೆ ಹಾಗೂ ಅಧಿಕಾರಿಗಳಿಗೆ ನಿರ್ದೇಶನ ನೀಡಲಾಗಿದೆ.
ನಮ್ಮ ಯುವಕರ ಹಾಗೂ ವಿದ್ಯಾರ್ಥಿಗಳ ಭವಿಷ್ಯವನ್ನು ಹಾಳುಮಾಡಲು ಯತ್ನಿಸುವ ಯಾವುದೇ ವ್ಯಕ್ತಿಯನ್ನು ಅಥವಾ ಶಕ್ತಿಯನ್ನು ಯಾವುದೇ ಕಾರಣಕ್ಕೂ ಕ್ಷಮಿಸುವುದಿಲ್ಲ ಎಂದು ಹೇಳಿದ್ದಾರೆ.



























