ಪುತ್ತೂರು, ಆ.21: ದಾಖಲಾತಿಯೊಂದು ತಾಂತ್ರಿಕ ದೋಷದಿಂದ ಸುಟ್ಟುಹೋದ ವಿಚಾರಕ್ಕೆ ಸಂಬಂಧಿಸಿದಂತೆ ಪುತ್ತೂರಿನ ದರ್ಭೆಯಲ್ಲಿರುವ ಜೆರಾಕ್ಸ್ ಹಾಗೂ ಲ್ಯಾಮಿನೇಷನ್ ಅಂಗಡಿಯಲ್ಲಿ ಎರಡು ಕಡೆಯವರ ನಡುವೆ ವಾಗ್ವಾದ ನಡೆದು, ಬಳಿಕ ಪರಸ್ಪರ ಹಲ್ಲೆ ನಡೆದ ಘಟನೆ ಶುಕ್ರವಾರ ಮಧ್ಯಾಹ್ನ ನಡೆದಿದೆ.
ಸುಳ್ಯ ತಾಲೂಕಿನ ಮಂಡೆಕೋಲು ನಿವಾಸಿಗಳಾದ ಮುಬಾಶಿರ, ಫಾತೀಮಾ ಹಾಗೂ ಮುಬಾಶಿರ್ ಅವರು ದರ್ಭೆಯಲ್ಲಿರುವ ಅಂಜನಾ ಪೈ ಅವರ “Dream Destination Digital Seva Kendra”ಗೆ ಕೆಲವು ದಾಖಲಾತಿಗಳನ್ನು ಜೆರಾಕ್ಸ್ ಹಾಗೂ ಲ್ಯಾಮಿನೇಷನ್ ಮಾಡಲು ನೀಡಿದ್ದರು. ಈ ವೇಳೆ ಒಂದು ದಾಖಲಾತಿ ತಾಂತ್ರಿಕ ದೋಷದಿಂದ ಸುಟ್ಟುಹೋಗಿದೆ ಎನ್ನಲಾಗಿದೆ.
ಈ ವಿಚಾರವಾಗಿ ಮುಬಾಶಿರ, ಫಾತೀಮಾ ಹಾಗೂ ಮುಬಾಶಿರ್ ಮತ್ತು ಅಂಗಡಿ ಮಾಲಕಿ ಅಂಜನಾ ಪೈ ಹಾಗೂ ಅವರ ಪುತ್ರ ಸುದರ್ಶನ್ ಪೈ ನಡುವೆ ವಾಗ್ವಾದ ಉಂಟಾಗಿ, ಬಳಿಕ ಪರಸ್ಪರ ಹಲ್ಲೆ ನಡೆದಿದೆ. ಘಟನೆಯ ವೇಳೆ ಸ್ಥಳದಲ್ಲಿ ಜನರು ಗುಂಪುಗೂಡಿದ್ದರು.
ಮಾಹಿತಿ ಪಡೆದ ಪುತ್ತೂರು ನಗರ ಠಾಣೆಯ ಪೊಲೀಸರು ಸ್ಥಳಕ್ಕೆ ತೆರಳಿ ಪರಿಸ್ಥಿತಿ ತಿಳಿಗೊಳಿಸಿದ್ದು, ಎರಡೂ ಕಡೆಯವರು ಠಾಣೆಗೆ ಬಂದು ದೂರು ನೀಡುವಂತೆ ಸೂಚಿಸಿದ್ದಾರೆ. ವಿಚಾರಣೆಗಾಗಿ ಸುದರ್ಶನ್ ಪೈ ಅವರನ್ನು ಠಾಣೆಗೆ ಕರೆತರುವ ವೇಳೆ ಸ್ಥಳದಲ್ಲಿ ಸೇರಿದ್ದ ಕೆಲವರು ಪೊಲೀಸರನ್ನು ತಡೆದಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಘಟನೆಗೆ ಸಂಬಂಧಿಸಿದಂತೆ ಎರಡೂ ಕಡೆಯಿಂದ ದೂರು ಹಾಗೂ ಪ್ರತಿದೂರು ದಾಖಲಿಸುವ ಪ್ರಕ್ರಿಯೆ ನಡೆಯುತ್ತಿದ್ದು, ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿದ ಆರೋಪದ ಬಗ್ಗೆಯೂ ಪ್ರತ್ಯೇಕ ಪ್ರಕರಣ ದಾಖಲಿಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಘಟನೆ ನಡೆದ ಅಂಗಡಿಯಲ್ಲಿ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಲಾಗಿದ್ದು, ದೃಶ್ಯಾವಳಿಗಳನ್ನು ಪರಿಶೀಲಿಸಿದ ಬಳಿಕ ಮುಂದಿನ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.ಅಲ್ಲದೆ, ಘಟನೆಯ ಕುರಿತು ಯಾವುದೇ ಸುಳ್ಳು ವದಂತಿಗಳನ್ನು ಹರಡಿದಲ್ಲಿ ಅಂತಹವರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸರು ಎಚ್ಚರಿಕೆ ನೀಡಿದ್ದಾರೆ.
ಪ್ರಕರಣಗಳು ದಾಖಲಾದ ಬಳಿಕ ಘಟನೆಯ ಸಂಪೂರ್ಣ ವಿವರಗಳನ್ನು ನೀಡಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.





























