ಪುತ್ತೂರು: ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರ್‌ಎಸ್‌ಎಸ್) ಹಿರಿಯ ಕಾರ್ಯಕರ್ತ ನೀರ್ಕಜೆ ಜಯಶ್ಯಾಮ್ ಅವರ ಧರ್ಮಪತ್ನಿ ಹಾಗೂ ಪುಣಚ ಕೋ-ಆಪರೇಟಿವ್ ಸೊಸೈಟಿಯ ಮಾಜಿ ನಿರ್ದೇಶಕಿ ಶ್ರೀಮತಿ ಭಾರತಿ (54) ಅವರು ಇಂದು ಮುಂಜಾನೆ ಹೃದಯಾಘಾತದಿಂದ ನಿಧನರಾದರು.
ಪುಣಚ ಗ್ರಾಮದ ಅಜ್ಜಿನಡ್ಕ ಸಮೀಪದ ನೀರ್ಕಜೆಯಲ್ಲಿ ಕುಟುಂಬದೊಂದಿಗೆ ವಾಸವಾಗಿದ್ದ ಭಾರತಿ ಅವರಿಗೆ ಇಂದು ಬೆಳಗ್ಗೆ ದಿಢೀರ್ ಹೃದಯಾಘಾತ ಸಂಭವಿಸಿದ್ದು, ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದಿದ್ದಾರೆ.
ಮೃತರು ಪತಿ ಜಯಶ್ಯಾಮ್, ಪುತ್ರ ಅಜೇಯ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.
ಸಮಾಜಮುಖಿ ಚಿಂತನೆ ಹೊಂದಿದ್ದ ಭಾರತಿ ಅವರು ತಮ್ಮ ಜೀವಿತಾವಧಿಯಲ್ಲೇ ನೇತ್ರದಾನ ಮಾಡುವ ಇಚ್ಛೆಯನ್ನು ವ್ಯಕ್ತಪಡಿಸಿದ್ದರು. ಅವರ ಆಶಯಕ್ಕೆ ಗೌರವ ಸೂಚಿಸಿರುವ ಕುಟುಂಬಸ್ಥರು, ಅವರ ಕಣ್ಣುಗಳನ್ನು ದಾನ ಮಾಡಲು ನಿರ್ಧರಿಸಿದ್ದಾರೆ.
ಅದರಂತೆ ಪುತ್ತೂರಿನ ಆಸ್ಪತ್ರೆಯಲ್ಲಿ ನೇತ್ರದಾನಕ್ಕೆ ಸಂಬಂಧಿಸಿದ ಪ್ರಕ್ರಿಯೆಗಳು ನೆರವೇರಲಿವೆ ಎಂದು ಮೃತರ ಆಪ್ತ ಮೂಲಗಳು ತಿಳಿಸಿದ್ದಾರೆ.
ಮೃತ್ಯುವಿನ ಬಳಿಕವೂ ಮತ್ತೊಬ್ಬರ ಬದುಕಿಗೆ ಬೆಳಕಾಗುವಂತೆ ಭಾರತಿ ಅವರ ಕಣ್ಣುಗಳನ್ನು ದಾನ ಮಾಡಲು ಕುಟುಂಬ ಕೈಗೊಂಡಿರುವ ನಿರ್ಧಾರಕ್ಕೆ ಸಾರ್ವಜನಿಕ ವಲಯದಲ್ಲಿ ಮೆಚ್ಚುಗೆ ವ್ಯಕ್ತವಾಗಿದೆ.





























