ಪುತ್ತೂರು: ಪುತ್ತೂರಿನ ದರ್ಬೆಯಲ್ಲಿ ನಿನ್ನೆ ಸಂಜೆ ಜೆರಾಕ್ಸ್ ಅಂಗಡಿಯಲ್ಲಿ ನಡೆದ ಪ್ರಮಾದಕ್ಕೆ ಸಂಬಂಧಿಸಿದಂತೆ ಅಂಗಡಿ ಮಾಲೀಕರ ಮೇಲೆ ನಡೆದ ಗುಂಪು ಹಲ್ಲೆ ಪ್ರಕರಣವನ್ನು ಅರುಣ್ ಕುಮಾರ್ ಪುತ್ತಿಲ ಖಂಡಿಸಿದ್ದಾರೆ.
ಗುಂಪು ಹಲ್ಲೆಯಿಂದಾಗಿ ಅಂಗಡಿ ಮಾಲಕಿ ಅಂಜನಾ ಪೈ ಅವರ ಕಾಲು ಮುರಿತಕ್ಕೊಳಗಾಗಿದ್ದು, ಅವರು ಆಸ್ಪತ್ರೆಗೆ ದಾಖಲಾಗಿದ್ದಾರೆ. ನಿನ್ನೆ ರಾತ್ರಿ ಆಸ್ಪತ್ರೆಗೆ ಭೇಟಿ ನೀಡಿದ ಅರುಣ್ ಕುಮಾರ್ ಪುತ್ತಿಲ ಅವರು ಅಂಜನಾ ಪೈ ಅವರ ಆರೋಗ್ಯ ವಿಚಾರಿಸಿ, ಘಟನೆಯ ಕುರಿತು ಮಾಹಿತಿ ಪಡೆದುಕೊಂಡರು.
ಬಳಿಕ ತಡರಾತ್ರಿ ಡಿವೈಎಸ್ಪಿ ಅವರನ್ನು ಭೇಟಿ ಮಾಡಿದ ಅವರು, ಗುಂಪು ಹಲ್ಲೆ ನಡೆಸಿದವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದರು.
ಪುತ್ತೂರು ಕ್ಷೇತ್ರದಲ್ಲಿ ಇಂತಹ ಘಟನೆಗಳು ಪದೇಪದೇ ನಡೆಯುತ್ತಿವೆ. ಇಂತಹ ಘಟನೆಗಳಿಗೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಪೊಲೀಸ್ ಇಲಾಖೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು ಎಂದು ಅರುಣ್ ಕುಮಾರ್ ಪುತ್ತಿಲ ಒತ್ತಾಯಿಸಿದ್ದಾರೆ.




























