ಪುತ್ತೂರು: ಪುತ್ತೂರು ನಗರ ಪೊಲೀಸ್ ಠಾಣೆಯ ಅ.ಕ್ರ. 97/2026 ಪ್ರಕರಣದಲ್ಲಿ ದಸ್ತಗಿರಿಯಾಗಿರುವ ಪುತ್ತೂರು ಕಸಬಾ ನಿವಾಸಿ ಆರೋಪಿ ಸುದರ್ಶನ ಪೈ, ಪಿ. (29) ಅವರ ವಿರುದ್ಧ ಈ ಹಿಂದೆಯೂ ಎರಡು ಪ್ರಕರಣಗಳು ದಾಖಲಾಗಿರುವುದು ಪೊಲೀಸ್ ಮೂಲಗಳಿಂದ ತಿಳಿದುಬಂದಿದೆ.
ಸುದರ್ಶನ ಪೈ ವಿರುದ್ಧ ಕಂಕನಾಡಿ ಪೊಲೀಸ್ ಠಾಣೆಯಲ್ಲಿ ಅ.ಕ್ರ. 182/2025ರಲ್ಲಿ NDPS ಕಾಯ್ದೆಯ ಕಲಂ 8(C) ಅಡಿಯಲ್ಲಿ ಪ್ರಕರಣ ದಾಖಲಾಗಿತ್ತು. ಅಲ್ಲದೆ, ರಾಮನಗರ ಜಿಲ್ಲೆಯ ಕುದೂರು ಪೊಲೀಸ್ ಠಾಣೆಯಲ್ಲಿ ಅ.ಕ್ರ. 87/2021ರಲ್ಲಿ ಐಪಿಸಿ ಕಲಂ 307, 504 ಜೊತೆಗೆ 34ರ ಅಡಿಯಲ್ಲಿ ಪ್ರಕರಣ ದಾಖಲಾಗಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
ಇನ್ನು, ಪ್ರಸ್ತುತ ಘಟನೆ ನಡೆದ ಸಂದರ್ಭದಲ್ಲಿ ಆರೋಪಿ ಸುದರ್ಶನ ಪೈ ಅವರ ತಂದೆ ಸದಾಶಿವ ಪೈ ಅವರು ಸ್ಥಳದಲ್ಲಿರಲಿಲ್ಲ ಎಂದು ತಿಳಿದುಬಂದಿದೆ. ಗಲಾಟೆ ನಡೆದ ಬಳಿಕ ಸ್ಥಳಕ್ಕೆ ಆಗಮಿಸಿದ ಅವರು ಗಲಾಟೆಯನ್ನು ಬಿಡಿಸಲು ಪ್ರಯತ್ನಿಸಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ಘಟನೆ ವೇಳೆ ಸ್ಥಳದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಸಾರ್ವಜನಿಕರು ಜಮಾಯಿಸಿದ್ದರು. ಕಾನೂನು ಸುವ್ಯವಸ್ಥೆಯ ದೃಷ್ಟಿಯಿಂದ ಸಾರ್ವಜನಿಕರಿಗೆ ಸ್ಥಳದಿಂದ ತೆರಳುವಂತೆ ಪೊಲೀಸರು ಸೂಚಿಸಿದರೂ, ಅವರು ಸ್ಥಳದಿಂದ ತೆರಳದ ಹಿನ್ನೆಲೆಯಲ್ಲಿ ಪರಿಸ್ಥಿತಿಯನ್ನು ನಿಯಂತ್ರಿಸಲು ಲಘು ಪ್ರಮಾಣದ ಲಾಠಿ ಚಾರ್ಜ್ ನಡೆಸಿ ಜನರನ್ನು ಚದುರಿಸಲಾಯಿತು ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಮುಂದಿನ ತನಿಖೆ ನಡೆಸುತ್ತಿದ್ದಾರೆ.





























