ಧರ್ಮಸ್ಥಳ: ಅಪ್ರಾಪ್ತ ಬಾಲಕಿಯ ಮೇಲೆ ಅತ್ಯಾಚಾರ ಎಸಗಿ, ವಿಚಾರವನ್ನು ಯಾರಿಗೂ ತಿಳಿಸದಂತೆ ಬೆದರಿಕೆ ಹಾಕಿದ ಆರೋಪದಡಿ ಆಂಧ್ರಪ್ರದೇಶ ಮೂಲದ 21 ವರ್ಷದ ಯುವಕನನ್ನು ಧರ್ಮಸ್ಥಳ ಪೊಲೀಸರು ಬಂಧಿಸಿದ್ದಾರೆ.
ಆರೋಪಿಯನ್ನು ಆಂಧ್ರಪ್ರದೇಶದ ಜಂಗಲ್ಪಲ್ಲಿ ನಿವಾಸಿ ಶ್ರೀಕಾಂತ್ (21) ಎಂದು ಗುರುತಿಸಲಾಗಿದೆ. ಧರ್ಮಸ್ಥಳ ಪೊಲೀಸ್ ಠಾಣಾ ವ್ಯಾಪ್ತಿಯ ಅಪ್ರಾಪ್ತ ಬಾಲಕಿಯೊಬ್ಬಳ ಮೇಲೆ 2025ರ ಸೆಪ್ಟೆಂಬರ್‌ನಿಂದ ನವೆಂಬರ್ ಅವಧಿಯಲ್ಲಿ ಬಲವಂತವಾಗಿ ಅತ್ಯಾಚಾರ ಎಸಗಿ, ಈ ವಿಚಾರವನ್ನು ಯಾರಿಗೂ ತಿಳಿಸದಂತೆ ಬೆದರಿಕೆ ಹಾಕಿದ್ದಾನೆ ಎಂದು ಆರೋಪಿಸಲಾಗಿದೆ. ಬಳಿಕ ಬಾಲಕಿ ಗರ್ಭಿಣಿಯಾಗಿ ಮಗುವಿಗೆ ಜನ್ಮ ನೀಡಿರುವುದು ತನಿಖೆಯಿಂದ ಬೆಳಕಿಗೆ ಬಂದಿದೆ.
ಈ ಸಂಬಂಧ 2026ರ ಆಗಸ್ಟ್ 23ರಂದು ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಅ.ಕ್ರ. 60/2026ರಂತೆ ಪ್ರಕರಣ ದಾಖಲಾಗಿದ್ದು, BNS ಕಲಂ 64(2)(m), 65(1), 351(2) ಹಾಗೂ ಪೋಕ್ಸೋ ಕಾಯ್ದೆಯ ಕಲಂ 4(2), 6ರ ಅಡಿಯಲ್ಲಿ ತನಿಖೆ ಮುಂದುವರಿದಿದೆ.
ಪ್ರಕರಣ ದಾಖಲಾಗುತ್ತಿದ್ದಂತೆ ಪರಾರಿಯಾಗಲು ಯತ್ನಿಸಿದ್ದ ಆರೋಪಿಯನ್ನು ಧರ್ಮಸ್ಥಳ ಠಾಣೆಯ ಪಿಎಸ್‌ಐ ಸಮರ್ಥ್ ಆರ್. ಗಾಣಿಗೇರ ಅವರ ನೇತೃತ್ವದ ತಂಡವು ಆಗಸ್ಟ್ 25ರಂದು ಬೆಂಗಳೂರಿನ ದೊಡ್ಡಬಳ್ಳಾಪುರದಲ್ಲಿ ಬಂಧಿಸಿದೆ.
ಕಾರ್ಯಾಚರಣೆಯಲ್ಲಿ ಧರ್ಮಸ್ಥಳ ಠಾಣೆಯ HC 418 ವೃಷಭ, HC 369 ಮಹೇಶ್ ಹಾಗೂ ಸಿಪಿಸಿ 975 ಚರಣ್ ರಾಜ್ ಭಾಗವಹಿಸಿದ್ದರು.
ಬಂಧಿತ ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಲಯವು 15 ದಿನಗಳ ನ್ಯಾಯಾಂಗ ಬಂಧನ ವಿಧಿಸಿದೆ. ಪ್ರಕರಣದ ತನಿಖೆ ಮುಂದುವರಿದಿದೆ.




























