ವಿಟ್ಲ: ವಿಟ್ಲ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ 2025-26 ನೇ ಸಾಲಿನಲ್ಲಿ 238.99 ಕೋಟಿ ರೂ.ಗೂ ಮಿಕ್ಕಿ ವ್ಯವಹಾರ ನಡೆಸಿದ್ದು, ಸುಮಾರು 1.47 ಕೋಟಿ ನಿವ್ವಳ ಲಾಭ ಗಳಿಸಿದೆ. ಸಂಘದ ಸದಸ್ಯರಿಗೆ ಶೇ.12 ಡಿವಿಡೆಂಡ್ ನೀಡುವ ಬಗ್ಗೆ ಆಡಳಿತ ಮಂಡಳಿ ಸಭೆಯಲ್ಲಿ ನಿರ್ಣಯ ಮಾಡಿದೆ. ಸೆ.6ರಂದು ಬೆಳಗ್ಗೆ 11ಕ್ಕೆ ವಿಠಲ ಪದವಿಪೂರ್ವ ಕಾಲೇಜಿನ ಸುವರ್ಣ ರಂಗಮಂದಿರದಲ್ಲಿ ವಾರ್ಷಿಕ ಮಹಾ ಸಭೆ ನಡೆಯಲಿದೆ ಎಂದು ಸಂಘದ ಅದ್ಯಕ್ಷ ನರಸಪ್ಪ ಪೂಜಾರಿ ಎನ್. ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿ, 2025-26ನೇ ಸಾಲಿನಲ್ಲಿ 121 ಮಂದಿ ಸದಸ್ಯರಾಗಿ ಸೇರ್ಪಡೆಯಾಗಿದ್ದು, 18.34ಲಕ್ಷ ರೂ. ಪಾಲು ಬಂಡವಾಳ ಜಮೆಯಾಗಿದೆ. ಸದ್ರಿ ವರ್ಷದಲ್ಲಿ 5511 ಎ ತರಗತಿ ಸದಸ್ಯರಿದ್ದು, 3.90ಕೋಟಿ ರೂ. ಪಾಲು ಬಂಡವಾಳ ಹೊಂದಿದೆ. 39.60ಕೋಟಿ ಠೇವಣಾತಿಯನ್ನು ಹೊಂದಿ ಶೇ.9.76 ಹೆಚ್ಚಳವಾಗಿದೆ. 39.25ಕೋಟಿ ಕೃಷಿ ಹಾಗೂ ಕೃಷಿಯೇತರ ಸಾಲ ನೀಡಿದ್ದು, ಶೇ.96.41ರಷ್ಟು ವಸೂಲಿ ಮಾಡಲಾಗಿದೆ. ಲೆಕ್ಕ ಪರಿಶೋಧನೆಯಲ್ಲಿ ಸಂಘ ಎ ತರಗತಿಯನ್ನು ಹೊಂದಿದೆ ಎಂದರು.
ಮುಖ್ಯ ಕಾರ್ಯನಿರ್ವಹಣಾಧಿಕಾರಿ ಭುವನೇಶ್ವರ ಬಿ. ಮಾತನಾಡಿ ನೇತ್ರ ತಪಾಸಣೆಯನ್ನು ನಡೆಸಿ, ಕನ್ನಡ ವಿತರಣೆ ಹಾಗೂ ಯಶನ್ವಿನಿ ಯೋಜನೆಯಡಿ ಉಚಿತ ಕಣ್ಣಿನ ಶಸ್ತ್ರ ಚಿಕಿತ್ಸೆಯನ್ನು ಮಾಡಲಾಗಿದೆ. ರೈತ ಸದಸ್ಯರಿಗೆ ಶೇ.2ರ ರಿಯಾಯಿತಿಯಲ್ಲಿ 25ಕೆಜಿ ಮೈಲತುತ್ತು ನೀಡಲಾಗಿದೆ. ಸದಸ್ಯರ ಪ್ರತಿಬಾವಂತ ಮಕ್ಕಳು ಶೇ.80ಕ್ಕಿಂತ ಅಧಿಕ ಅಂಕಗಳಿಸಿದ ಎಸ್ ಎಸ್ ಎಲ್ ಸಿ ಹಾಗೂ ಪಿ ಯು ಸಿ ವಿದ್ಯಾರ್ಥಿಗಳಿಗೆ ಪುರಸ್ಕಾರ ನೀಡಲಾಗುವುದು ಎಂದರು.
ಉಪಾಧ್ಯಕ್ಷ ಮಂಜುಳಾ, ನಿರ್ದೇಶಕರಾದ ಮಹಾಬಲೇಶ್ವರ ಭಟ್ ಎ., ಉದಯ ಕುಮಾರ್ ಎನ್., ಸದಾನಂದ ಗೌಡ ಸೇರಾಜೆ, ಮೋಹನದಾಸ್ ಉಕ್ಕಡ, ರಾಘವೇಂದ್ರ ಪೈ ಎ., ದಿನೇಶ ಕೆ., ಸಂಧ್ಯಾ ಮೋಹನ್, ವಾಸು ಸಿ. ಎಚ್., ಹರೀಶ್ ನಾಯ್ಕ, ತೀರ್ಥರಾಮ ಉಪಸ್ಥಿತರಿದ್ದರು.





























