ಬೆಳ್ತಂಗಡಿ: ನಾವೂರು ಗ್ರಾಮದ ಕ್ಲಿನಿಕ್ಗೆ ಬೆಂಕಿ ಹಚ್ಚಿ ಔಷಧ ಹಾಗೂ ವೈದ್ಯಕೀಯ ಸಲಕರಣೆಗಳನ್ನು ಸುಟ್ಟುಹಾಕಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಳ್ತಂಗಡಿ ಪೊಲೀಸರು ಮೂವರು ಆರೋಪಿಗಳನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.
ಬೆಳ್ತಂಗಡಿ ನಡ ಗ್ರಾಮದ ಡಾ. ಪ್ರದೀಪ್ ಎ. (51) ಅವರು ಬೆಳ್ತಂಗಡಿ ತಾಲೂಕಿನ ನಾವೂರು ಎಂಬಲ್ಲಿ ಕ್ಲಿನಿಕ್ ನಡೆಸುತ್ತಿದ್ದರು. ದಿನಾಂಕ 06-10-2026ರ ರಾತ್ರಿ ಕ್ಲಿನಿಕ್ಗೆ ಕಿಡಿಗೇಡಿಗಳು ಬೆಂಕಿ ಹಚ್ಚಿದ ಪರಿಣಾಮ ಔಷಧಗಳು ಹಾಗೂ ವೈದ್ಯಕೀಯ ಸಲಕರಣೆಗಳು ಸೇರಿದಂತೆ ಅಂದಾಜು ₹2ರಿಂದ ₹3 ಲಕ್ಷ ಮೌಲ್ಯದ ಸೊತ್ತುಗಳು ಸುಟ್ಟುಹೋಗಿದ್ದವು.
ಈ ಕುರಿತು ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಅಪರಾಧ ಸಂಖ್ಯೆ 112/2026ರಂತೆ ಭಾರತೀಯ ನ್ಯಾಯ ಸಂಹಿತೆ (BNS), 2023ರ ಕಲಂ 326(f), 326(g) ಹಾಗೂ 324(5) ಅಡಿಯಲ್ಲಿ ಪ್ರಕರಣ ದಾಖಲಾಗಿತ್ತು.
ಪ್ರಕರಣದ ತನಿಖೆ ಕೈಗೊಂಡ ಬೆಳ್ತಂಗಡಿ ಪೊಲೀಸರು, ನಾವೂರು ನಿವಾಸಿಗಳಾದ ರವಿ ಕುಮಾರ್ (31), ಸುರೇಶ್ ಪಿ.ಎನ್. (44) ಹಾಗೂ ದಿನೇಶ್ ಪ್ರಭು (51) ಎಂಬ ಮೂವರು ಆರೋಪಿಗಳನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸುವ ಪ್ರಕ್ರಿಯೆ ನಡೆಯಲಿದೆ ಎಂದು ತಿಳಿದುಬಂದಿದೆ.


























