ಉಪ್ಪಿನಂಗಡಿ: ಇಲ್ಲಿನ ಬಸ್ ನಿಲ್ದಾಣದ ಬಳಿಯ ಬಿಎಸ್ಎನ್ಎಲ್ ಕಚೇರಿಯ ತಡೆಗೋಡೆ ಪ್ರಯಾಣಿಕರ ತಂಗುದಾಣಕ್ಕೆ ಕುಸಿದು ಬಿದ್ದಿದ್ದು, ಅದೃಷ್ಟವಶಾತ್ ಪ್ರಯಾಣಿಕರು ಅಪಾಯದಿಂದ ಪಾರಾದ ಘಟನೆ ಶನಿವಾರ ರಾತ್ರಿ ನಡೆದಿದೆ.
ಬಿಎಸ್ಎನ್ಎಲ್ ಅಧೀನದ ಕಚೇರಿ ಹಾಗೂ ಟವರ್ ಇರುವ ಪ್ರದೇಶದ ಸುರಕ್ಷತೆಗಾಗಿ 8 ಅಡಿಗಿಂತಲೂ ಎತ್ತರದ ಆವರಣ ಗೋಡೆಯನ್ನು ನಿರ್ಮಿಸಲಾಗಿದ್ದು, ಕಳೆದೆರಡು ದಿನಗಳಲ್ಲಿ ಸುರಿದ ಮಳೆಯಿಂದಾಗಿ ಆವರಣಗೋಡೆಯ ಬುಡ ದುರ್ಬಲಗೊಂಡು, ಶನಿವಾರ ರಾತ್ರಿ ಸನಿಹದಲ್ಲೇ ಇದ್ದ ಬಸ್ ನಿಲ್ದಾಣದ ಪ್ರಯಾಣಿಕರು ಕುಳಿತುಕೊಳ್ಳುವ ಕಟ್ಟಡದ ಮೇಲೆ ಕುಸಿದು ಬಿದ್ದಿದೆ.
ತಡೆಗೋಡೆ ಕುಸಿತಗೊಂಡಾಗ ಉಂಟಾದ ಶಬ್ದದಿಂದ ಬೆಚ್ಚಿ ಬಿದಿದ್ದು ಬಸ್ಸಿಗಾಗಿ ಕಾಯುತ್ತಿದ್ದ ಪ್ರಯಾಣಿಕರು ಓಡಿಹೋಗಿ ಅಪಾಯದಿಂದ ಪಾರಾಗಿದ್ದಾರೆ. ಗೋಡೆಯ ಒಂದು ಭಾಗ ಸಂಪೂರ್ಣ ಕುಸಿದು ಬಿದ್ದರೆ ಬಹು ಭಾಗ ಸ್ಥಳದಲ್ಲಿ ಅಳವಡಿಸಲಾಗಿದ್ದ ಬೃಹತ್ ಜಾಹೀರಾತು ಫಲಕದ ಕಬ್ಬಿಣದ ಕಂಬದ ಆಧಾರದಲ್ಲಿ ವಾಲಿ ನಿಂತಿದ್ದು, ಯಾವುದೇ ಸಂದರ್ಭದಲ್ಲಿ ಇಡೀ ತಂಗುದಾಣದ ಕಟ್ಟ ಡವನ್ನೇ ಹಾನಿಗೊಳಿಸುವ ಸಾಧ್ಯತೆಯ ಭೀತಿ ಮೂಡಿಸಿದೆ.
ಪ್ರಯಾಣಿಕರು ವಿಶ್ರಾಂತಿ ಪಡುವ ತಂಗುದಾಣದ ಮುಂಭಾಗದ ಎಲ್ಲಾ ಪಿಲ್ಲರ್ ಗಳ ಬುಡ ಸಂಪೂರ್ಣ ಟೊಳ್ಳಾಗಿದ್ದು, ಅಪಾಯಕಾರಿ ಸ್ಥಿತಿಯಲ್ಲಿರುವುದನ್ನು ಸ್ಥಳೀಯ ಉದ್ಯಮಿಯೋರ್ವರು ಇದೇ ಸಂದರ್ಭದಲ್ಲಿ ಮಾಧ್ಯಮದ ಗಮನಕ್ಕೆ ತಂದಿದ್ದಾರೆ. ಪ್ರಯಾಣಿಕರ ವಿಶ್ರಾಂತಿ ಕೊಠಡಿಯೂ ಅಪಾಯ ಸ್ಥಿತಿಯಲ್ಲಿರುವುದು ಕಂಡು ಬಂದಿದೆ.

























