ನೆಲ್ಯಾಡಿ: ಬೈಕ್ ತಡೆದು ಕೊಲೆ ಬೆದರಿಕೆಯೊಡ್ಡಿ ಮೊಬೈಲ್ ಹಾಗೂ ಹಣ ಲೂಟಿಗೈದಿರುವ ಪ್ರಕರಣವೊಂದು ಉಪ್ಪಿನಂಗಡಿ ಠಾಣಾ ವ್ಯಾಪ್ತಿಯ ಬೆಳ್ತಂಗಡಿ ತಾಲೂಕಿನ ಉರುವಾಲು ಗ್ರಾಮದ ಹಲೇಜಿ ಎಂಬಲ್ಲಿ ಅ.16ರಂದು ನಡೆದಿರುವ ಬಗ್ಗೆ ಪೊಲೀಸರಿಗೆ ದೂರು ನೀಡಲಾಗಿದೆ.
ಮೂಲತ: ಕಡಬ ತಾಲೂಕಿನ ಕೊಣಾಜೆ ಸಿಆರ್ಸಿ ಕಾಲೋನಿ ನಿವಾಸಿ, ಪ್ರಸ್ತುತ ಬೆಳ್ತಂಗಡಿ ತಾಲೂಕಿನ ಬಳಂಜ ಗ್ರಾಮದ ಮಾವಿನಕಟ್ಟೆ ಎಂಬಲ್ಲಿ ವಾಸವಾಗಿರುವ ಮಿಥಿಲೇಶ್ (18ವ.) ಎಂಬವರು ನೀಡಿದ ದೂರಿನಂತೆ ತನ್ನೀಶ್ ಹಾಗೂ ಇತರ ಇಬ್ಬರ ವಿರುದ್ಧ ಉಪ್ಪಿನಂಗಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅ.16ರಂದು ಬೆಳಗ್ಗೆ ನಾನು ಅತ್ತೆ ಮಗಾದೇವಿಯವರೊಂದಿಗೆ ಬಳಂಜ ಮನೆಯಿಂದ ತನ್ನ ಬೈಕ್ ನಲ್ಲಿ ಕೊಣಾಜೆ ಗ್ರಾಮಕ್ಕೆ ರೇಶನ್ ಕಾರ್ಡ್ ಬಗ್ಗೆ ಕೆ.ವೈ.ಸಿ. ಗೆ ಹೆಬ್ಬೆಟ್ಟು ನೀಡಲು ಹೋಗುತ್ತಿದ್ದ ವೇಳೆ ಗುರುವಾಯನಕೆರೆ-ಉಪ್ಪಿನಂಗಡಿ ರಸ್ತೆಯ ಉರುವಾಲು ಗ್ರಾಮದ ಹಲೇಜಿ ಎಂಬಲ್ಲಿಗೆ ತಲುಪಿದಾಗ ಕಾರಿನಲ್ಲಿ ಬಂದ ಆರೋಪಿಗಳು ಬೈಕನ್ನು ತಡೆದು ನಿಲ್ಲಿಸಿದ್ದು, ತನ್ನೀಶ್ ಮತ್ತು ಇತರ ಇಬ್ಬರು ಕಾರಿನಿಂದ ಇಳಿದು ಬಂದು ನನ್ನನ್ನು ಉದ್ದೇಶಿಸಿ ನನ್ನ ಹಣ ಎಲ್ಲಿ, ಯಾಕೆ ಹಣ ಕೊಟ್ಟಿಲ್ಲ ಎಂದು ಪ್ರಶ್ನಿಸಿ ಚೂರಿಯನ್ನು ತೋರಿಸಿ ಕೊಲೆ ಮಾಡುವುದಾಗಿ ಬೆದರಿಸಿ ನನ್ನ ಪ್ಯಾಂಟಿನ ಕಿಸೆಯಿಂದ 3,000 ರೂ. ಮೌಲ್ಯದ ಮೊಬೈಲ್ ಸೆಟ್, ಅಂಗಿಯ ಕಿಸೆಯಲ್ಲಿದ್ದ 5,200 ರೂ. ನಗದು ಹಾಗೂ ಅತ್ತೆಯ ಕೈಯಲ್ಲಿದ್ದ 2,000 ರೂ. ಮೌಲ್ಯದ ಮೊಬೈಲ್ ಸೆಟ್ ಬಲತ್ಕಾರವಾಗಿ ತೆಗೆದುಕೊಂಡು ಹೋಗಿರುವುದಾಗಿ ಆರೋಪಿಸಲಾಗಿದೆ.
ಈ ಬಗ್ಗೆ ಮಿಥಿಲೇಶ್ ನೀಡಿದ ದೂರಿನಂತೆ ಉಪ್ಪಿನಂಗಡಿ ಪೊಲೀಸರು ಅ.ಕ್ರ: 134/2026. ಕಲಂ: 126(2), 308 (5) ಜೊತೆಗೆ3(5) ಬಿಎನ್ ಎಸ್-2023 ಯಂತೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.

























