ಬಂಟ್ವಾಳ: ಅಮ್ಟಾಡಿ ಗ್ರಾಮದ ಎರ್ಮುಡೆ ಎಂಬಲ್ಲಿ ಹಣವನ್ನು ಪಣವಾಗಿಟ್ಟು ಕೋಳಿ ಅಂಕದ ಜೂಜಾಟ ನಡೆಸುತ್ತಿದ್ದ ಸ್ಥಳಕ್ಕೆ ಬಂಟ್ವಾಳ ನಗರ ಪೊಲೀಸರು ದಾಳಿ ನಡೆಸಿದ್ದು, ಓರ್ವನನ್ನು ವಶಕ್ಕೆ ಪಡೆದಿದ್ದಾರೆ.
ಅ.18ರಂದು ಸಂಜೆ ಅಮ್ಟಾಡಿ ಗ್ರಾಮದ ಎರ್ಮುಡೆ ಎಂಬಲ್ಲಿ ಕೋಳಿ ಅಂಕದ ಜೂಜಾಟ ನಡೆಯುತ್ತಿರುವ ಬಗ್ಗೆ ಬಂಟ್ವಾಳ ನಗರ ಪೊಲೀಸ್ ಠಾಣೆಯ ಉಪನಿರೀಕ್ಷಕ ಸಂದೀಪ್ ಕುಮಾರ್ ಶೆಟ್ಟಿ ಅವರಿಗೆ ಮಾಹಿತಿ ಲಭಿಸಿತ್ತು. ಈ ಹಿನ್ನೆಲೆಯಲ್ಲಿ ಸಿಬ್ಬಂದಿಗಳೊಂದಿಗೆ ಸ್ಥಳಕ್ಕೆ ತೆರಳಿ ಪರಿಶೀಲಿಸಿದಾಗ ಹಣವನ್ನು ಪಣವಾಗಿಟ್ಟು ಕೋಳಿ ಅಂಕದ ಜೂಜಾಟ ನಡೆಸುತ್ತಿರುವುದು ದೃಢಪಟ್ಟಿದೆ.
ಪೊಲೀಸರು ದಾಳಿ ನಡೆಸಿದ ವೇಳೆ ಕೃತ್ಯದಲ್ಲಿ ಭಾಗಿಯಾಗಿದ್ದ ಹಲವರು ಪರಾರಿಯಾಗಿದ್ದು, ಬಂಟ್ವಾಳ ಬಿ ಮೂಡ ಗ್ರಾಮದ ಗಣೇಶ್ (33) ಎಂಬಾತನನ್ನು ವಶಕ್ಕೆ ಪಡೆಯಲಾಗಿದೆ.
ಸ್ಥಳದಲ್ಲಿದ್ದ 12 ಅಂಕದ ಕೋಳಿಗಳು, ಕೋಳಿ ಅಂಕಕ್ಕೆ ಬಳಸುವ ಕತ್ತಿ ಹಾಗೂ 1,100 ರೂ. ನಗದನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಈ ಸಂಬಂಧ ಬಂಟ್ವಾಳ ನಗರ ಪೊಲೀಸ್ ಠಾಣೆಯಲ್ಲಿ ಅ.ಕ್ರ. 147/2026ರಂತೆ ಕರ್ನಾಟಕ ಪೊಲೀಸ್ ಕಾಯ್ದೆಯ ಕಲಂ 87, 93 ಹಾಗೂ ಪ್ರಾಣಿಗಳ ಮೇಲಿನ ಕ್ರೌರ್ಯ ತಡೆ ಕಾಯ್ದೆಯ ಕಲಂ 11(1)(M)(ii), 11(1)(N) ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ.

























