ಸುಳ್ಯ: ನಿಂತಿಕಲ್ಲಿನ ವೃದ್ಧಿ ಕಾಂಪ್ಲೆಕ್ಸ್ನಲ್ಲಿ ‘ಸ್ಕಂದಗಿರಿ’ ಹೆಸರಿನ ಹೋಟೆಲ್ ನಡೆಸುತ್ತಿದ್ದ ಕಾಣಿಯೂರು ಗ್ರಾಮದ ಬಾರೆತ್ತಡಿ ದಿ. ವಾಚಣ್ಣ ಗೌಡರ ಪುತ್ರ ನವೀಶ್ (ನವೀಶ್ ಗೌಡ) ಅವರು ಅ. 16ರಂದು ಹೃದಯಾಘಾತದಿಂದ ನಿಧನರಾದರು.
ನವೀಶ್ ಅವರು ಹೆಚ್ಚಾಗಿ ಹೋಟೆಲ್ನಲ್ಲೇ ಮಲಗುತ್ತಿದ್ದರು ಎನ್ನಲಾಗಿದೆ. ಅ. 16ರಂದು ಬೆಳಿಗ್ಗೆ ಮನೆಯವರು ಅವರ ಮೊಬೈಲ್ಗೆ ಕರೆ ಮಾಡಿದಾಗ ಕರೆ ಸ್ವೀಕರಿಸಿರಲಿಲ್ಲ. ಇದರಿಂದ ಆತಂಕಗೊಂಡ ಅವರ ಸಹೋದರ ಭರತ್ ಹೋಟೆಲ್ಗೆ ತೆರಳಿ ನೋಡಿದಾಗ ನವೀಶ್ ಅವರು ಅಸ್ವಸ್ಥಗೊಂಡಿರುವುದು ಕಂಡುಬಂದಿದೆ.
ತಕ್ಷಣ 108 ಆ್ಯಂಬುಲೆನ್ಸ್ ಮೂಲಕ ಅವರನ್ನು ಸುಳ್ಯಕ್ಕೆ ಕರೆದೊಯ್ಯುತ್ತಿದ್ದಾಗ ದಾರಿ ಮಧ್ಯೆ ಮೃತಪಟ್ಟಿರುವುದಾಗಿ ಸಹೋದರ ಭರತ್ ತಿಳಿಸಿದ್ದಾರೆ.
ಮೃತರು ಅವಿವಾಹಿತರಾಗಿದ್ದು, ತಾಯಿ ಪುಷ್ಪಾವತಿ, ಸಹೋದರರಾದ ಪ್ರಶಾಂತ್ ಮತ್ತು ಭರತ್, ಸಹೋದರಿ ವೀಣಾ ಸೇರಿದಂತೆ ಕುಟುಂಬಸ್ಥರು, ಬಂಧುಮಿತ್ರರನ್ನು ಅಗಲಿದ್ದಾರೆ.


























