ಕುಂದಾಪುರ: ಅಂಗವೈಕಲ್ಯದಿಂದ ಬಳಲುತ್ತಿದ್ದ 14 ವರ್ಷದ ಮಗಳನ್ನು ಕತ್ತಿಯಿಂದ ಹತ್ಯೆಗೈದ ಬಳಿಕ ತಾಯಿಯೂ ಆತ್ಮಹತ್ಯೆಗೆ ಶರಣಾದ ಹೃದಯವಿದ್ರಾವಕ ಘಟನೆ ಕುಂದಾಪುರ ತಾಲೂಕಿನ ಕೆದೂರು ಗ್ರಾಮ ಪಂಚಾಯತ್ ವ್ಯಾಪ್ತಿಯ ಶಾನಾಡಿಯಲ್ಲಿ ಅ.25ರ ಭಾನುವಾರ ಬೆಳಗ್ಗೆ ಸುಮಾರು 8.30ರ ವೇಳೆಗೆ ನಡೆದಿದೆ.
ಶಾನಾಡಿ ನಿವಾಸಿ ಸುಧಾಕರ ಅವರ ಪುತ್ರಿ ಸುಪ್ರತಿ (14) ಹಾಗೂ ಪತ್ನಿ ನೇತ್ರಾವತಿ (40) ಮೃತಪಟ್ಟವರು. ಸುಪ್ರತಿ ಬಾಲ್ಯದಿಂದಲೇ ಅಂಗವೈಕಲ್ಯದಿಂದ ಬಳಲುತ್ತಿದ್ದು, ನಡೆದಾಡಲು ಸಾಧ್ಯವಾಗದ ಸ್ಥಿತಿಯಲ್ಲಿದ್ದಳು. ಮಗಳಿಗೆ ಚಿಕಿತ್ಸೆ ಕೊಡಿಸಲು ಹಲವು ಪ್ರಯತ್ನಗಳನ್ನು ನಡೆಸಿದರೂ ಫಲಕಾರಿಯಾಗಿರಲಿಲ್ಲ ಎನ್ನಲಾಗಿದೆ.
ಮಗಳ ಆರೈಕೆಯನ್ನು ನೇತ್ರಾವತಿಯೇ ಮಾಡುತ್ತಿದ್ದರು. ಮಗಳ ಆರೋಗ್ಯ ಸ್ಥಿತಿಯಿಂದ ಅವರು ತೀವ್ರವಾಗಿ ಮನನೊಂದಿದ್ದರು ಎಂದು ಪತಿ ಸುಧಾಕರ ತಿಳಿಸಿದ್ದಾರೆ. ಇದೇ ಹಿನ್ನೆಲೆಯಲ್ಲಿ ಈ ದುರಂತ ಸಂಭವಿಸಿರುವ ಶಂಕೆ ವ್ಯಕ್ತವಾಗಿದೆ.
ಘಟನಾ ಸ್ಥಳಕ್ಕೆ ಉಡುಪಿ ಜಿಲ್ಲೆಯ ಹೆಚ್ಚುವರಿ ಪೊಲೀಸ್ ಅಧೀಕ್ಷಕ ಸುಧಾಕರ ಎಸ್., ಡಿವೈಎಸ್ಪಿ ಎಚ್.ಡಿ. ಕುಲಕರ್ಣಿ, ವೃತ್ತ ನಿರೀಕ್ಷಕ ಗೋಪಿಕೃಷ್ಣ, ಕೋಟ ಪೊಲೀಸ್ ಠಾಣೆಯ ಉಪನಿರೀಕ್ಷಕ ಪ್ರವೀಣ್ ಕುಮಾರ್ ಆರ್. ಸೇರಿದಂತೆ ಅಪರಾಧ ವಿಭಾಗದ ಅಧಿಕಾರಿಗಳು ಹಾಗೂ ಅಪರಾಧ ಸ್ಥಳ ಪರಿಶೀಲನಾ ತಂಡ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

























