ಬಂಟ್ವಾಳ: ಮನೆಯಲ್ಲಿ ಆಟವಾಡುತ್ತಿದ್ದಾಗ ಆಕಸ್ಮಿಕವಾಗಿ ಕುತ್ತಿಗೆಗೆ ಹಗ್ಗ ಸಿಲುಕಿ ಉಸಿರುಗಟ್ಟಿ 9 ವರ್ಷದ ಬಾಲಕ ಮೃತಪಟ್ಟ ದಾರುಣ ಘಟನೆ ಅ.25ರಂದು ನಡೆದಿದೆ.
ಬಂಟ್ವಾಳ ತಾಲೂಕಿನ ಕುಕ್ಕಿಪಾಡಿ ನಿವಾಸಿ ಆನಂದ ಪೂಜಾರಿ ಅವರ ಪುತ್ರ ಮೃತಪಟ್ಟ ಬಾಲಕ ಎಂದು ತಿಳಿದುಬಂದಿದೆ.
ಅ.25ರಂದು ಬಾಲಕನ ಮನೆಯಲ್ಲಿದ್ದಾಗ ಬೊಬ್ಬೆ ಕೇಳಿ ಆತನ ಚಿಕ್ಕಪ್ಪ ಜಯಾನಂದ (42) ಅವರು ಅಲ್ಲಿಗೆ ತೆರಳಿ ನೋಡಿದಾಗ, ಮನೆಯಲ್ಲಿ ಆಟವಾಡುತ್ತಿದ್ದ ಬಾಲಕನ ಕುತ್ತಿಗೆಗೆ ಕಿಟಕಿಯಲ್ಲಿದ್ದ ಹಗ್ಗ ಆಕಸ್ಮಿಕವಾಗಿ ಸಿಲುಕಿಕೊಂಡು ಯಾವುದೇ ಪ್ರತಿಕ್ರಿಯೆ ನೀಡದ ಸ್ಥಿತಿಯಲ್ಲಿದ್ದನು ಎನ್ನಲಾಗಿದೆ.
ತಕ್ಷಣ ಬಾಲಕನನ್ನು ಉಪಚರಿಸಿ ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ, ಪರೀಕ್ಷಿಸಿದ ವೈದ್ಯರು ಬಾಲಕ ಮೃತಪಟ್ಟಿರುವುದಾಗಿ ತಿಳಿಸಿದ್ದಾರೆ.
ಈ ಕುರಿತು ಪುಂಜಾಲಕಟ್ಟೆ ಪೊಲೀಸ್ ಠಾಣೆಯಲ್ಲಿ ಯುಡಿಆರ್ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

























