ಕುಂದಾಪುರ: ಬಟ್ಟೆ ಒಗೆಯಲೆಂದು ಕೆರೆಗೆ ತೆರಳಿದ್ದ ಇಬ್ಬರು ಬಾಲಕಿಯರು ಆಕಸ್ಮಿಕವಾಗಿ ನೀರಿಗೆ ಬಿದ್ದು ಮುಳುಗಿ ಸಾವನ್ನಪ್ಪಿದ ದಾರುಣ ಘಟನೆ ರವಿವಾರ ಸಂಜೆ ಹೊಸಾಡು ಗ್ರಾಮದ ಕೊಪ್ಪರಿಗೆ ಗುಡ್ಡೆಯ ಕಡುಬಿನ ಕೆರೆಯಲ್ಲಿ ಸಂಭವಿಸಿದೆ.
ಮೃತರನ್ನು ಮುಳ್ಳಿಕಟ್ಟೆಯಲ್ಲಿ ಜೋಪಡಿಯಲ್ಲಿ ವಾಸವಾಗಿದ್ದ ಮೂಲತಃ ಹಾವೇರಿ ಜಿಲ್ಲೆಯ ಶಿಗ್ಗಾವಿ ತಾಲೂಕಿನ ಮುದ್ದಿನಕೊಪ್ಪದ ಚಂದ್ರು ಬಸವರಾಜ ವೇಷಗಾರ ಹಾಗೂ ಮಂಜಕಾಳು ದಂಪತಿಯ ಪುತ್ರಿ ಸುನೀತಾ (13) ಮತ್ತು ಅವರ ಚಿಕ್ಕಪ್ಪ ದಿ. ಮಂಜುನಾಥ ಹಾಗೂ ಶಾರದಾ ದಂಪತಿಯ ಪುತ್ರಿ ವೈಶಾಲಿ (13) ಎಂದು ಗುರುತಿಸಲಾಗಿದೆ. ಇಬ್ಬರೂ ಹೊಸಾಡು ಸರಕಾರಿ ಶಾಲೆಯ 7ನೇ ತರಗತಿಯ ವಿದ್ಯಾರ್ಥಿನಿಯರಾಗಿದ್ದರು.
ಘಟನೆಯ ವಿವರ: ರವಿವಾರ ಸಂಜೆ ಸುಮಾರು 4 ಗಂಟೆಗೆ ಜೋಪಡಿಯ ಐವರು ಮಕ್ಕಳು ಬಟ್ಟೆ ಒಗೆಯಲು ಕಡುಬಿನ ಕೆರೆಗೆ ತೆರಳಿದ್ದರು. ಈ ವೇಳೆ ಸುನೀತಾ ಹಾಗೂ ವೈಶಾಲಿ ಆಕಸ್ಮಿಕವಾಗಿ ಕಾಲು ಜಾರಿ ಕೆರೆಗೆ ಬಿದ್ದು ನೀರಿನಲ್ಲಿ ಮುಳುಗಿದ್ದಾರೆ ಎನ್ನಲಾಗಿದೆ.
ವಿಷಯ ತಿಳಿಯುತ್ತಿದ್ದಂತೆ ಗಂಗೊಳ್ಳಿಯ ಮುಳುಗು ತಜ್ಞ ದಿನೇಶ್ ಖಾರ್ವಿ ಅವರ ತಂಡ, ಟೀಮ್ ಎಚ್ಐ ತುರ್ತು ಸ್ಪಂದನ ತಂಡ, ಕುಂದಾಪುರ ಅಗ್ನಿಶಾಮಕ ದಳದ ಸಿಬ್ಬಂದಿ ಹಾಗೂ ಗಂಗೊಳ್ಳಿ ಪೊಲೀಸರು ಸ್ಥಳಕ್ಕೆ ಧಾವಿಸಿ ಕಾರ್ಯಾಚರಣೆ ನಡೆಸಿ ಮೃತದೇಹಗಳನ್ನು ಮೇಲಕ್ಕೆತ್ತಲು ಸಹಕರಿಸಿದರು.
ಗಂಗೊಳ್ಳಿಯ ಶ್ರೀ ವೀರೇಶ್ವರ ಸೇವಾ ಟ್ರಸ್ಟ್ನ ಆಂಬ್ಯುಲೆನ್ಸ್ ಸಿಬ್ಬಂದಿ ಮೃತದೇಹಗಳನ್ನು ಕುಂದಾಪುರದ ಸರಕಾರಿ ಆಸ್ಪತ್ರೆಗೆ ಸಾಗಿಸಲು ನೆರವಾದರು. ಗಂಗೊಳ್ಳಿ ಪೊಲೀಸ್ ಠಾಣೆಯ ಪಿಎಸ್ಐ ಪವನ್ ನಾಯಕ್ ಹಾಗೂ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿದರು.


























