ಬೆಳ್ತಂಗಡಿ: ಮೂಲತಃ ಉಡುಪಿ ಜಿಲ್ಲೆಯ ಪೆರಂಬಳ್ಳಿ ನಿವಾಸಿ ಖ್ಯಾತ ನಿರ್ದೇಶಕ ಹಾಗೂ ನಟ ಸೂರ್ಯೋದಯ್ ಪೆರಂಪಳ್ಳಿ ರವರ ಪುತ್ರ ಮಯೂರ್(18.ವ) ರವರು ಬೆಂಗಳೂರಿನಲ್ಲಿ ಜು.2 ರಂದು ರಾತ್ರಿ ನಡೆದ ಅಪಘಾತದಲ್ಲಿ ಸಾವನ್ನಪ್ಪಿದ್ದಾರೆ.
ಬೆಳ್ತಂಗಡಿಯ ಮೊಬೈಲ್ ಪ್ಯಾಲೇಸ್ ಮಾಲಕ ಉಮೇಶ್ ಕುಮಾರ್ ರವರ ಬಾಮೈದ(ಪತ್ನಿಯ ಸಹೋದರ)ರಾಗಿರುವ ಸೂರ್ಯೋದಯ್ ಪೆರಂಪಳ್ಳಿ ರವರು ತಮ್ಮ ಕುಟುಂಬದೊಂದಿಗೆ ಪ್ರಸ್ತುತ ಬೆಂಗಳೂರಿನಲ್ಲಿ ವಾಸ್ತವ್ಯವಿದ್ದಾರೆ.
ಮಯೂರ್‌ರವರು ಬೆಂಗಳೂರಿನ ಬ್ಯಾಡರಹಳ್ಳಿಯ ನ್ಯೂ ಲಿಂಕ್ ರಸ್ತೆಯಲ್ಲಿ ತಮ್ಮ ದ್ವಿಚಕ್ರ ವಾಹನದಲ್ಲಿ ಪ್ರಯಾಣಿಸುತ್ತಿರುವ ವೇಳೆ ಟ್ಯಾಂಕರ್ ವಾಹನ ಡಿಕ್ಕಿ ಹೊಡೆದು ಈ ದುರ್ಘಟನೆ ಸಂಭವಿಸಿದೆ ಎನ್ನಲಾಗಿದೆ.
ಡಿಕ್ಕಿಯಾದ ರಭಸಕ್ಕೆ ಮಯೂರ್‌ರವರು ಬೈಕಿನಿಂದ ಎಸೆಯಲ್ಪಟ್ಟಿದ್ದು, ತಲೆಗೆ ಗಂಭೀರ ಗಾಯಗೊಂಡ ಪರಿಣಾಮ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ. ಈ ಬಗ್ಗೆ ಬ್ಯಾಡರಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ದ್ವಿತೀಯ ಪಿಯುಸಿ ವಿದ್ಯಾಭ್ಯಾಸ ಪೂರೈಸಿರುವ ಮಯೂರ್‌ರವರು ತಂದೆ ಸೂರ್ಯೋದಯ್ ಪೆರಂಪಳ್ಳಿ, ತಾಯಿ ರೇಣುಕಾ, ಸಹೋದರ ಯಶಸ್ಸ್ ಹಾಗೂ ಬಂಧುವರ್ಗದವರನ್ನು ಅಗಲಿದ್ದಾರೆ.