ವಿಟ್ಲ: ಹಳೆ ದ್ವೇಷದ ಹಿನ್ನೆಲೆಯಲ್ಲಿ ಯುವಕನೊಬ್ಬನಿಗೆ ನಾಲ್ವರ ತಂಡ ಹಲ್ಲೆ ನಡೆಸಿ, ಚೂರಿಯಿಂದ ಇರಿದು ಪರಾರಿಯಾದ ಘಟನೆ ಕೊಳ್ನಾಡು ಗ್ರಾಮದ ಕಾಡುಮಠ ಎಂಬಲ್ಲಿ ಸಂಭವಿಸಿದೆ. ಈ ಬಗ್ಗೆ ವಿಟ್ಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕೊಳ್ನಾಡು ಗ್ರಾಮದ ಕಾಡುಮಠ ನಿವಾಸಿ ಅಬ್ದುಲ್ ಹ್ಯಾರಿಸ್ (29) ಗಾಯಗೊಂಡಿದ್ದು, ವಿಟ್ಲ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಚಿಕಿತ್ಸೆ ಪಡೆದುಕೊಂಡಿದ್ದಾರೆ.
ಕಾಡುಮಠ ನಿವಾಸಿಗಳಾದ ಅವಿನಾಶ್,. ವಿನೀತ್, ದಿನೇಶ್, ಮತ್ತೊಬ್ಬ ಅಪರಿಚಿತ ವ್ಯಕ್ತಿ ವಿರುದ್ಧ ಹಾರೀಸ್ ದೂರು ನೀಡಿದ್ದಾರೆ.
ಅಬ್ದುಲ್ ಹ್ಯಾರಿಸ್ ಅವರು ಸಾಲೆತ್ತೂರಿನಿಂದ ತನ್ನ ಮನೆಗೆ ಬೈಕ್ ನಲ್ಲಿ ಬರುತ್ತಿದ್ದಾಗ ಹಿಂದಿನಿಂದ ಬಂದ ಅವಿನಾಶ್, ವಿನೀತ್, ದಿನೇಶ್ ಮತ್ತು ಮತ್ತೊಬ್ಬ ಅಪರಿಚಿತ ವ್ಯಕ್ತಿ ಸೇರಿಕೊಂಡು ಹಾರೀಸ್ ಅವರ ದ್ವಿಚಕ್ರ ವಾಹನವನ್ನು ನಿಲ್ಲಿಸಿ ವಿನೀತ್, ದಿನೇಶ್, ಮತ್ತು ಅಪರಿಚಿತ ವ್ಯಕ್ತಿ ಇವರುಗಳು ಕೈಯಿಂದ ಹೊಡೆದು, ಬೈಕಿನಿಂದ ದೂಡಿಹಾಕಿದ್ದು, ಬಳಿಕ ಅವಿನಾಶ್ ಎಂಬಾತ ಚೂರಿಯಿಂದ ಹಾರೀಸ್ ಅವರ ಬೆನ್ನಿಗೆ ಚುಚ್ಚಿದ್ದಾರೆ. ಬಳಿಕ ನೀನು ನಮ್ಮ ತಂಟೆಗೆ ಬಂದರೆ ನಿನ್ನ ಜೀವ ಸಹಿತ ಬಿಡುವುದಿಲ್ಲ ಎಂದು ಬೆದರಿಕೆ ಹಾಕಿ ತೆರಳಿದ್ದಾರೆ.
ಕೆಲ ಸಮಯದ ಹಿಂದೆ ಅವಿನಾಶನ ತಂಗಿಗೆ ಕೀಟಲೆ ಮಾಡಿದ್ದಾನೆ ಎಂದು ಹಾರೀಸ್ ವಿರುದ್ಧ ವಿಟ್ಲ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಈ ಹಲ್ಲೆಗೆ ಇದೇ ಕಾರಣವಿರಬಹುದು ಎನ್ನಲಾಗಿದೆ. ಈ ಬಗ್ಗೆ ಪೂರ್ವ ದ್ವೇಷದಿಂದ ಈ ಹಲ್ಲೆ ನಡೆದಿದೆ ಎಂದು ವರದಿಯಾಗಿದೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.