ಪುತ್ತೂರು: ಲಂಚ ಪಡೆದಿರುವುದು ಸಾಬೀತು ಆದ ಹಿನ್ನೆಲೆಯಲ್ಲಿ ಕೊಣಾಜೆಯಲ್ಲಿರುವ ಮಂಗಳೂರು ವಿಶ್ವವಿದ್ಯಾನಿಲಯ ಸಮಾಜಶಾಸ್ತ್ರ ವಿಭಾಗದ ಸಹಾಯಕ ಪ್ರೊಫೆಸರ್ ಡಾ.ಅನಿತ ರವಿಶಂಕರ್ ಗೆ ಐದು ವರ್ಷ ಜೈಲು ಶಿಕ್ಷೆ ವಿಧಿಸಿ ಲೋಕಾಯುಕ್ತ ನ್ಯಾಯಾಲಯ ಆದೇಶಿಸಿದೆ.
04-12-2012ರಂದು ಪಿ.ಹೆಚ್.ಡಿ. ವಿದ್ಯಾರ್ಥಿನಿ ಪ್ರೇಮ ಡಿ’ಸೋಜ ಎಂಬವರಿಂದ ಅವರ ಪ್ರಬಂಧ ಅಂಗೀಕಾರ ಆಗಬೇಕಾದರೆ ಮೈಸೂರಿನಿಂದ ಬರುವ ಬಾಹ್ಯ ಪರಿವೀಕ್ಷಕರ ಖರ್ಚಿನ ಬಾಬ್ತು ರೂ. 16,800/- ಲಂಚ ನೀಡಬೇಕು ಎಂದು ಹಣಕ್ಕೆ ಬೇಡಿಕೆ ಇಟ್ಟು ಮುಂಗಡ ಹಣ ರೂ. 5,000/- ಸ್ವೀಕರಿಸುತ್ತಿದ್ದಾಗ ಮಂಗಳೂರು ಲೋಕಾಯುಕ್ತ ನಿರೀಕ್ಷಕ ಉಮೇಶ್ ಜಿ. ಶೇಟ್ ಮತ್ತು ಸಿಬ್ಬಂದಿ ದಾಳಿ ಮಾಡಿ ಪ್ರಸ್ತುತ ಕೊಣಾಜೆ ಮಂಗಳೂರು ಯುನಿವರ್ಸಿಟಿಯ ಸಮಾಜ ಶಾಸ್ತ್ರದ ಸಹಾಯಕ ಪ್ರೊಫೆಸರ್ ಆಗಿರುವ ಡಾ. ಅನಿತಾ ರವಿಶಂಕರ್ ರವರನ್ನು ಬಂದಿಸಿದ್ದರು. ಸದ್ರಿ ಆರೋಪಿ ಮೊದಲು ರೂ. 10,000/-, ನಂತರ ರೂ 4,000/- ಮತ್ತು ತದನಂತರ ರೂ. 16,800/- ಕ್ಕೆ ಬೇಡಿಕೆ ಇಟ್ಟಿದ್ದರು ಎಂದು ಆರೋಪಿಸಲಾಗಿತ್ತು. ಲೋಕಾಯುಕ್ತ ಸಂಸ್ಥೆಯ ಪರವಾಗಿ ಒಟ್ಟು 9 ಸಾಕ್ಷಿದಾರರನ್ನು ನ್ಯಾಯಾಲಯದಲ್ಲಿ ಸಾಕ್ಷಿ ವಿಚಾರಣೆಗೆ ಒಳ ಪಡಿಸಲಾಗಿತ್ತು. ವಿಚಾರಣೆ ನಡೆಸಿದ ಮಂಗಳೂರು ಲೋಕಾಯುಕ್ತ ವಿಶೇಷ ನ್ಯಾಯಾಲಯ ವಿಶೇಷ ಸರಕಾರಿ ಅಭಿಯೋಜಕರಾದ ಸುಳ್ಯ ಮೂಲದ ಕೆ. ಎಸ್. ಎನ್. ರಾಜೇಶ್ ರವರ ವಾದವನ್ನು ಪುರಸ್ಕರಿಸಿ, ಆರೋಪಿಯ ಮೇಲಿನ ಆರೋಪ ಸಾಬೀತಾಗಿದೆ ಎಂದು ತೀರ್ಮಾನಕ್ಕೆ ಬಂದಿದೆ. ಈ ಹಿನ್ನೆಲೆಯಲ್ಲಿ ಆರೋಪಿಗೆ ಶಿಕ್ಷೆ ವಿಧಿಸಲಾಗಿದೆ. ಮೂರನೇ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಹಾಗೂ ಲೋಕಾಯುಕ್ತ ವಿಶೇಷ ನ್ಯಾಯಾಲಯದ ನ್ಯಾಯಾಧೀಶ ಬಿ. ಬಿ. ಜಕಾತಿರವರು ಶಿಕ್ಷೆ ಪ್ರಕಟಿಸಿದ್ದಾರೆ.
ಭ್ರಷ್ಟಾಚಾರ ನಿಗ್ರಹ ಕಾಯಿದೆಯ ಕಲಂ 7ರ ಅಡಿ ಯಲ್ಲಿ ಎಸಗಿದ ಅಪರಾಧಕ್ಕೆ ಆರೋಪಿಗೆ 2 ವರ್ಷ ಸಾದಾ ಸಜೆ ಮತ್ತು ರೂ. 15,000/- ದಂಡ, ಕಲಂ 13 (1) (ಡಿ) ಯಲ್ಲಿ ಎಸಗಿದ ಅಪರಾಧಕ್ಕೆ 3 ವರ್ಷ ಸಾದಾ ಸಜೆ ಮತ್ತು ರೂ. 15,000/- ದಂಡ, ದಂಡ ತೆರಲು ತಪ್ಪಿದಲ್ಲಿ ತಲಾ ಒಂದು ತಿಂಗಳು ಸಾದಾ ಸಜೆ ಅನುಭವಿಸಬೇಕೆಂದು 09-07-2021 ರಂದು ನ್ಯಾಯಾಲಯ ಆದೇಶಿಸಿದೆ. ಎರಡೂ ಅಪರಾಧಕ್ಕೆ ಸಂಬಂಧಿಸಿದ ಶಿಕ್ಷೆಗಳನ್ನು ಅಪರಾಧಿ ಜೊತೆಯಾಗಿ ಅನುಭವಿಸಬೇಕೆಂದು ನ್ಯಾಯಾಲಯ ತೀರ್ಪಿನಲ್ಲಿ ತಿಳಿಸಿದೆ. ಆಗಿನ ಲೋಕಾಯುಕ್ತ ಇನ್ಸ್ಪೆಕ್ಟರ್ ಉಮೇಶ್ ಜಿ. ಶೇಟ್ ತನಿಖೆ ನಡೆಸಿ ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದರು.