ಮಂಗಳೂರು: ಕರಾವಳಿಯಲ್ಲಿ ಕೈಗಾರಿಕಾ ಪ್ರಾಂಗಣ ನಿರ್ಮಿಸಲು ಭೂಸ್ವಾಧೀನ, ಕೈಗಾರಿಕೆ ನಿರ್ಮಾಣದ ಬಗ್ಗೆ ಕೈಗಾರಿಕಾ ಸಚಿವ ಜಗದೀಶ್ ಶೆಟ್ಟರ್ ಹೇಳಿಕೆ ನೀಡಿದ್ದಾರೆ. ಆದರೆ ಇದುವರೆಗೆ ಎಂಆರ್‌ಪಿಎಲ್,ಎಚ್‌ಪಿಸಿಎಲ್ಎಂಸಿಎಫ್ ಕುದುರೆಮುಖ ಸಹಿತ ಸ್ಥಳೀಯ ಆರ್ಥಿಕ ವಲಯಕ್ಕಾಗಿ ಭೂಮಿ ಕಳೆದುಕೊಂಡವರು ನೆಮ್ಮದಿ ಕಳೆದುಕೊಂಡಿದ್ದಾರೆ ಹೊರತು ಉದ್ಯೋಗ ಸಿಕ್ಕಿಲ್ಲ. ನೌಕರಿ ಆಸೆಯಿಂದ ಜಾಗ ಕಳೆದುಕೊಂಡವರು ಇಂದು ಉದ್ಯೋಗವೂ ಇಲ್ಲ. ಭೂಮಿಯೂ ಇಲ್ಲದೆ ಪರಿತಪಿಸುವಂತಾಗಿದೆ. ಅವಿಭಜಿತ ಜಿಲ್ಲೆಯಲ್ಲಿ ಕೈಗಾರಿಕೆ ನಿರ್ಮಿಸುವುದಾದರೆ ಮೊದಲು ಈವರೆಗೆ ಸ್ಥಳೀಯರಿಗೆ ಎಷ್ಟು ಉದ್ಯೋಗ ನೀಡಿದ್ದೀರಿ ಲೆಕ್ಕ ಕೊಡಿ ಎಂದು ಇಂಡಿಯನ್ ನ್ಯಾಷನಲ್ ಟ್ರೇಡ್ ಯೂನಿಯನ್ ಕಾಂಗ್ರೆಸ್ ಆಗ್ರಹಿಸಿದೆ.
ಮುಂದೆಯೂ ಕೈಗಾರಿಕಾ ವಲಯಗಳಲ್ಲಿ ಅನ್ಯ ರಾಜ್ಯದವರೇ ಉದ್ಯೋಗ ಪಡೆಯುವ ಸಾಧ್ಯತೆಯೇ ಹೆಚ್ಚು. ಇಲ್ಲಿನವರಿಗೆ ನಿರುದ್ಯೋಗವೇ ಗತಿಯಾಗುತ್ತದೆ. ಹೀಗಾಗಿ ತಕ್ಷಣ ಸರೋಜಿನಿ ಮಹಿಷಿ ವರದಿ ಜಾರಿಗೆ ತನ್ನಿ, ಕಡ್ಡಾಯವಾಗಿ ಸ್ಥಳೀಯರಿಗೆ ಉದ್ಯೋಗ ಕೊಡಲೇ ಬೇಕು ಎಂಬ ಕಾನೂನು ರೂಪಿಸಿ ಬಳಿಕ ಭೂಮಿ ಪಡೆದು ಕೈಗಾರಿಕೆ ಸ್ಥಾಪಿಸಿ, ಇಲ್ಲದಿದ್ದಲ್ಲಿ ಇಂಟಕ್ ಉಗ್ರ ಅಭಿಯಾನವನ್ನು ರಾಜ್ಯದಾದ್ಯಂತ ಹಮ್ಮಿಕೊಳ್ಳಲಿದೆ ಎಂದರು.
ಮುಖ್ಯಮಂತ್ರಿ ದಿವಂಗತ ರಾಮಕೃಷ್ಣ ಹೆಗಡೆ ಕರ್ನಾಟಕದಲ್ಲಿ ಕನ್ನಡಿಗರಿಗೆ ದೊರೆಯುತ್ತಿದ್ದ ಉದ್ಯೋಗಾವಕಾಶಗಳನ್ನು ಪರಿಶೀಲಿಸಿ ವಿಮರ್ಶಿಸಲು ರಾಜ್ಯದ ಮೊದಲ ಮಹಿಳಾ ಸಂಸದೆ, ಸಚಿವೆ ಹಾಗೂ ಮಹಿಳಾ ಹೋರಾಟಗಾರ್ತಿ ಸರೋಜಿನಿ ಮಹಿಷಿ ನೇತೃತ್ವದಲ್ಲಿ ಒಂದು ಸಮಿತಿಯನ್ನು ರಚಿಸಿದ್ದರು. ಸತತ ಮೂರು ವರ್ಷ ಈ ಕುರಿತು ಪರಿಶೀಲನೆ ನಡೆಸಿದ್ದ ಸಮಿತಿ 1986ರಲ್ಲಿ ಸರ್ಕಾರಕ್ಕೆ 53 ಅಂಶಗಳ ಒಂದು ವರದಿಯನ್ನು ಸಲ್ಲಿಸಿತ್ತು. ಅದೇ “ಸರೋಜಿನಿ ಮಹಿಷಿ ವರದಿ”.
ಆದರೆ, ಭಾರತದಲ್ಲಿ ಬಹುರಾಷ್ಟ್ರೀಯ ಕಂಪನಿಗಳು ಸರ್ಕಾರವನ್ನೇ ನಿಯಂತ್ರಿಸಬಲ್ಲಷ್ಟು ಶಕ್ತಿ ಪಡೆದಿವೆ. ಇಲ್ಲಿ ಸರ್ಕಾರದ ಆದೇಶಗಳಿಗೆ ಕವಡೆ ಕಾಸಿನ ಕಿಮ್ಮತ್ತಿಲ್ಲ. ಹಾಗಾಗಿ ರಾಜ್ಯದ ಯುವಜನತೆ ಕೆಲಸವಿಲ್ಲದೆ ಪರದಾಡುವಂತಹ ಪರಿಸ್ಥಿತಿ ಎದುರಾಗಿದೆ. ಕನ್ನಡ ಶಾಲೆಯಲ್ಲಿ ಕಲಿತ ವಿದ್ಯಾರ್ಥಿಗಳಿಗೆ ಸರ್ಕಾರಿ ಕೆಲಸದಲ್ಲಿ ಶೇ.5ರಷ್ಟು ಮೀಸಲು ಸೌಲಭ್ಯ ನೀಡಿದಂತೆ , ಬಹುರಾಷ್ಟ್ರೀಯ ಕಂಪನಿಗಳಲ್ಲೂ ಮೀಸಲಾತಿ ನೀಡಬೇಕು. ಸಾರ್ವಜನಿಕ ಮತ್ತು ಖಾಸಗಿ ಉದ್ದಿಮೆಗಳಲ್ಲಿ ಕನ್ನಡಿಗರಿಗೆ ಉದ್ಯೋಗ ನೀಡಿಕೆಯಲ್ಲಿ ಆದ್ಯತೆ ಇರಬೇಕು. ಸರ್ಕಾರಿ ವಲಯದಲ್ಲಿ ಶೇ.90 ರಷ್ಟು ಉದ್ಯೋಗಗಳನ್ನು ಸ್ಥಳೀಯರಿಗೆ ನೀಡಬೇಕು. ಬಹುರಾಷ್ಟ್ರೀಯ ಮತ್ತು ಖಾಸಗಿ ಉದ್ದಿಮೆಗಳಲ್ಲೂ ಮೊದಲು ಶೇ.5 ರಷ್ಟು ಕನ್ನಡ ಮಾಧ್ಯಮದಲ್ಲಿ ಓದಿದ ವಿದ್ಯಾರ್ಥಿಗಳಿಗೆ ಕೆಲಸ ನೀಡಬೇಕು.
ಅಂದಿನ ಸರ್ಕಾರ ಈ ವರದಿಯಲ್ಲಿನ 12 ಶಿಫಾರಸ್ಸುಗಳನ್ನು ತನಗೆ ಒಪ್ಪುವ ಅಧಿಕಾರವಲ್ಲವೆಂದು ಕೈ ಬಿಟ್ಟಿದ್ದು, ಉಳಿದ ಶಿಫಾರಸ್ಸುಗಳ ಅನುಷ್ಠಾನಕ್ಕೆ ತರಲು ಪ್ರಯತ್ನಿಸುವುದಾಗಿ ಆಶ್ವಾಸನೆ ನೀಡಿತ್ತು. ಆದರೆ ಬಹುರಾಷ್ಟ್ರೀಯ/ಖಾಸಗಿ ಕಂಪನಿಗಳಲ್ಲಿ ಈ ಶಿಫಾರಸ್ಸನ್ನು ಪಾಲಿಸಬೇಕು, ಕನ್ನಡಿಗರಿಗೆ ಉದ್ಯೋಗಾವಕಾಶ ನೀಡಬೇಕು ಎನ್ನುವ ಪ್ರಮುಖ ಶಿಫಾರಸಿಗೆ ಈವರೆಗೆ ಸರ್ಕಾರ ಒಪ್ಪಿಗೆ ನೀಡಿಲ್ಲ.ಪರಿಣಾಮ ರಾಜ್ಯದ ಉದ್ಯೋಗಗಳು ಕನ್ನಡಿಗರಿಗೆ ಲಭ್ಯವಾಗದೆ ಅನ್ಯ ರಾಜ್ಯದವರ ಪಾಲಾಗುತ್ತಿದೆ. ಕೂಡಲೇ ಸರಕಾರ ಇನ್ನಾದರೂ ಸ್ಥಳೀಯವಾಗಿ ಸ್ಥಾಪಿತವಾಗುವ ಕಂಪನಿಗಳಲ್ಲಿ ಆಯಾ ಸ್ಥಳೀಯರಿಗೆ ಉದ್ಯೋಗವನ್ನು ನೀಡಬೇಕು ಎಂಬುದು ಇಂಟಕ್ ಒತ್ತಾಯವಾಗಿದ್ದು ಈ ನಿಟ್ಟಿನಲ್ಲಿ ಸರಕಾರವನ್ನು ಆಗ್ರಹಿಸುತ್ತದೆ ಎಂದು ಸುದ್ದಿಗೋಷ್ಠಿಯಲ್ಲಿ ಇಂಟಕ್ ಪ್ರಮುಖರು ಹೇಳಿದರು.
ಈ ಸಂದರ್ಭದಲ್ಲಿ ರಾಜ್ಯ ಕಾರ್ಯಾಧ್ಯಕ್ಷರಾದ ರಾಕೇಶ್ ಮಲ್ಲಿ, ದ.ಕ ಜಿಲ್ಲಾಧ್ಯಕ್ಷರಾದ ಮನೋಹರ್ ಶೆಟ್ಟಿ, ರಾಜ್ಯ ಉಪಾಧ್ಯಕ್ಷ ರಹೀಂ, ಕಾನೂನು ಸಲಹೆಗಾರ ದಿನಕರ್ ಶೆಟ್ಟಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಚಿತ್ತರಂಜನ್ ಶೆಟ್ಟಿ ಬೋಂಡಾಲ, ತಾರಾನಾಥ ಶೆಟ್ಟಿ ಕಳ್ಳಿಗೆ, ಅಬೂಬಕರ್ ಎನ್.ಎಮ್. ಪಿಟಿ, ಪಿ. ಕೆ ಸುರೇಶ್ ಉಪಸ್ಥಿತರಿದ್ದರು.