ಮಂಗಳೂರು : ಹಳೆಯಂಗಡಿಯ ಮುಖ್ಯ ರಸ್ತೆಯಲ್ಲಿರುವ ಶ್ರೀ ದುರ್ಗಾಪರಮೇಶ್ವರಿ ವಿನಾಯಕ ಮಠಕ್ಕೆ ನುಗ್ಗಿದ ಕಳ್ಳರು ಬೆಳ್ಳಿಯ ಆಭರಣ ಹಾಗೂ ಕಾಣಿಕೆ ಡಬ್ಬಿಗಳನ್ನು ಕಳವು ಮಾಡಿರುವ ಘಟನೆ ನಡೆದಿದೆ. ನಿನ್ನೆ ರಾತ್ರಿ ಸುರಿಯುತ್ತಿದ್ದ ಧಾರಾಕಾರ ಮಳೆಯಲ್ಲಿ ಘಟನೆ ನಡೆದಿದ್ದು ಸ್ಥಳೀಯವಾಗಿ ಯಾರ ಗಮನಕ್ಕೂ ಬಂದಿರಲಿಲ್ಲ. ಇಂದು ಬೆಳಿಗ್ಗೆ ಅರ್ಚಕರು ನಿತ್ಯ ಪೂಜೆಗೆಂದು ಬಾಗಿಲು ತೆರೆದಾಗ ಘಟನೆ ಬೆಳಕಿಗೆ ಬಂದಿದೆ.
ಈ ಮಠದ ಹಿಂದಿನ ಬಾಗಿಲು ಒಡೆದು ಒಳನುಗ್ಗಿದ ಕಳ್ಳರು ವಿನಾಯಕ ದೇವರ ಮತ್ತು ಶ್ರೀ ದೇವಿಯ ಬೆಳ್ಳಿಯ ಪ್ರಭಾವಳಿಗಳು ಎರಡೂ ದೇವರ ಬೆಳ್ಳಿಯ ಮುಖ ಕವಚಗಳು ಹಾಗೂ ಇನ್ನಿತರ ಚಿನ್ನ ಹಾಗು ಬೆಳ್ಳಿಯ ಆಭರಣಗಳು ಸೇರಿದಂತೆ ಎರಡು ಕಾಣಿಕೆ ಡಬ್ಬಿಗಳನ್ನು ಕಳ್ಳರು ದೋಚಿದ್ದಾರೆ. ಸುಮಾರು 7 ಕೆ.ಜಿ ಬೆಳ್ಳಿ ಹಾಗೂ ಒಂಬತ್ತು ಗ್ರಾಂ ಚಿನ್ನದ ದೇವರ ಆಭರಣಗಳು ಕಳವಾಗಿರುವ ಸಂಭವವಿದೆ. ವಿಶ್ವಕರ್ಮ ಸಮುದಾಯದ ಪುರಾತನ ಮಠ ಇದಾಗಿದ್ದು, ಎರಡು ವರ್ಷಗಳ ಹಿಂದಷ್ಟೇ ನವೀಕರಣಗೊಂಡಿತ್ತು ಎಂದು ಮಾಹಿತಿ ದೊರಕಿದೆ.
ಮುಲ್ಕಿಯ ಠಾಣಾಧಿಕಾರಿ ಕುಸುಮಾಧಾರನ್ ಹಾಗೂ ಸಿಬ್ಬಂದಿಗಳು ಘಟನಾ ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.