ಕಾಣಿಯೂರು: ಮಳೆಗಾಲ ಆರಂಭ ಆಯಿತೆಂದರೆ ಈ ರಸ್ತೆ ಯಾವ ಹೊತ್ತಿಗೆ ಬ್ಲಾಕ್ ಆಗುತ್ತದೆ ಎಂದು ಊಹಿಸಲು ಸಾಧ್ಯವಿಲ್ಲ. ಕಾಣಿಯೂರು – ಮಾದೋಡಿ – ಪೆರುವಾಜೆ- ಬೆಳ್ಳಾರೆ ಹಾಗೂ ಕಾಣಿಯೂರು – ನೀರಜರಿ-ಅಬೀರ ಸಂಪರ್ಕ ರಸ್ತೆಯ ಮೂಲಕ ಸಂಚಾರಿಸುವ ಪ್ರಯಾಣಿಕರು ಸಂಕಷ್ಟದಲ್ಲಿ ಸಿಲುಕುತ್ತಿದ್ದಾರೆ. ಕಾಣಿಯೂರಿನಿಂದ ಸ್ವಲ್ಪ ದೂರದಲ್ಲಿಯೇ ರೈಲ್ವೆ ಸೇತುವೆಯ ಕೆಲಭಾಗದಲ್ಲಿ ರಸ್ತೆಯ ಪಕ್ಕದಲ್ಲಿಯೇ ಇರುವ ಹೊಳೆಯಲ್ಲಿ ನೀರು ಹರಿದು ಹೋಗುತ್ತಿದ್ದು. ಪ್ರತಿ ಭಾರಿಯು ಮಳೆಗಾಲದಲ್ಲಿ ರಸ್ತೆಯು ಮುಳುಗಡೆಯಾಗುವುದು ಸಾಮಾನ್ಯ. ಮಳೆಗಾಲದಲ್ಲಿ ಸುರಿದ ಭಾರೀ ಮಳೆಯಿಂದ ಬಂದ ವಿಪರಿತ ನೆರೆ ನೀರಿಗೆ ಕಾಂಕ್ರೀಟ್ ರಸ್ತೆ ಮತ್ತು ತಡೆಗೋಡೆ ಕೊಚ್ಚಿ ಹೋಗಿದೆ. ಈ ಸಂಪರ್ಕ ರಸ್ತೆಯಲ್ಲಿ ತಿರುವು ಕೂಡ ಇದ್ದು ರಾತ್ರಿ ಹೊತ್ತು ಮಳೆಗಾಲದಲ್ಲಿ ಸಂಪರ್ಕಿಸಿದರೆ ಇಲ್ಲಿ ಅಪಾಯ ಕಟ್ಟಿಟ್ಟ ಬುತ್ತಿ. ಈ ರಸ್ತೆಯಲ್ಲಿ ವಾಹನಗಳು ಮಾತ್ರವಲ್ಲ ಸಾರ್ವಜನಿಕರು ತೆರಳುವ ದಾರಿಯೂ ಆಗಿದ್ದು ಅಪಾಯಕ್ಕೆ ಆಹ್ವಾನ ನೀಡುತ್ತಿದೆ. ಮಳೆಗಾಲದಲ್ಲಿ ರಸ್ತೆಯು ಮುಳುಗುವುದರಿಂದ ಆತಂಕದಲ್ಲಿಯೇ ಪ್ರಯಾಣಿಸಬೇಕಾದ ಅನಿವಾರ್ಯತೆ ಇಲ್ಲಿಯಾದ್ದಾಗಿದೆ.
ರೈಲ್ವೆ ಸೇತುವೆ ಕೆಳಭಾಗದ ಹೊಳೆ ಬದಿಯಲ್ಲಿಯೇ ಅಪಯಕಾರಿ ರಸ್ತೆ ರೈಲು ಮಾರ್ಗವು ಮೀಟರ್ ಗ್ರೇಜ್‌ನಿಂದ ಬ್ರಾಡ್ ಗ್ರೇಜ್‌ಗೆ ಪರಿವರ್ತನೆಯಾಗುವ ಸಂದರ್ಭದಲ್ಲಿ ಕಾಣಿಯೂರು- ಮಾದೋಡಿ ಜಿ.ಪಂ, ರಸ್ತೆಯನ್ನು ಬಂದ್ ಮಾಡಿ ಪರ್ಯಾಯ ರಸ್ತೆಯಾಗಿ ಈ ರಸ್ತೆಯನ್ನು ರೈಲ್ವೆ ಇಲಾಖೆಯವರೇ ನಿರ್ಮಿಸಿ ಕೊಟ್ಟಿದ್ದರು. ರಸ್ತೆಯನ್ನು ಬಂದ್ ಮಾಡ ಬಾರದಾಗಿ ಊರಿನವರು ಆ ಸಂದರ್ಭದಲ್ಲಿ ಪ್ರತಿಭಟಿಸಿದ್ದರು. ಆ ಕಾರಣಕ್ಕಾಗಿ ರೈಲ್ವೆ ಸೇತುವೆಯ ಕೆಲಭಾಗದಲ್ಲಿ ಹೊಳೆ ಬದಿಗೆ ತಡೆಗೋಡೆಯನ್ನು ನಿರ್ಮಿಸಿ ಡಾಮಾರು ಹಾಕಿ ಹೊಳೆ ಬದಿಗೆ ತಡೆಗೋಡೆಯನ್ನು ನಿರ್ಮಿಸಿ ಸಹ ಕೊಟ್ಟಿದ್ದರು. ಕಾಮಗಾರಿ ಕಳಪೆಯಾದ ಕಾರಣ ರಸ್ತೆಯ ತಡೆಗೋಡೆಯು ಮಳೆ ನೀರಿನಿಂದ ಕೊಚ್ಚಿಕೊಂಡು ಹೋಯಿತು. ಈ ಸ್ಥಳದಲ್ಲಿ ಹಲವಾರು ದ್ವಿ ಚಕ್ರ ಹಾಗೂ ಇತರ ವಾಹನಗಳು ಹೊಳೆಗೆ ಬಿದ್ದ ಘಟನೆಗಳು ಇವೆ. ಕಾಣಿಯೂರು- ಮಾದೋಡಿ- ಬೆಳ್ಳಾರೆ ಸಂಪರ್ಕ ರಸ್ತೆ ಮಾತ್ರವಲ್ಲದೇ ಕಾಣಿಯೂರು- ನೀರಜರಿ- ಅಬೀರ ರಸ್ತೆಯ ಮೂಲಕ ಬೆಳ್ಳಾರೆಗೆ ಸಂಪರ್ಕ ಹೊದಿರುವ ರಸ್ತೆಯೂ ಇದಾಗಿದೆ. ಅಲ್ಲದೇ ಕಾಣಿಯೂರು ಶ್ರೀ ಲಕ್ಷ್ಮೀನರಸಿಂಹ ಭಜನಾ ಮಂದಿರ ಹಾಗೂ ಕಾಣಿಯೂರು- ಪೆರ್ಲೋಡಿಗೆ ಸಂಪರ್ಕ ರಸ್ತೆಯೂ ಇದಾಗಿದ್ದು, ಈ ರಸ್ತೆಗೆ ಸಮರ್ಪಕವಾದ ಡಾಮಾರೀಕರಣ ಹಾಗೂ ಮಳೆಗಾಲದಲ್ಲಿ ರಸ್ತೆಗೆ ನೀರು ಬರದಂತೆ ತಡೆಯಲು ಹೊಳೆಗೆ ತಡೆಗೋಡೆ ನಿರ್ಮಿಸಿ ಸಾರ್ವಜನಿಕರಿಗೆ ಮತ್ತು ವಾಹನಗಳಿಗೆ ಬರಬಹುದಾದ ಅಪಾಯವನ್ನು ತಪ್ಪಿಸಬೇಕು ಎಂಬುದು ಸ್ಥಳಿಯರ ಆಗ್ರಹ. ಅತೀ ಪ್ರಮುಖ ರಸ್ತೆಯಾದ ಕಾರಣ ಸಂಬಂಧ ಪಟ್ಟ ಅಧಿಕಾರಿಗಳು ತುರ್ತಾಗಿ ಗಮನಹರಿಸಿ ಅತೀ ಶೀಘ್ರದಲ್ಲಿ ಸಮಸ್ಯೆಯನ್ನು ಪರಿಹರಿಸಬೇಕಾಗಿದೆ.
ಅಪಾಯ ಖಂಡಿತ
ಕಾಣಿಯೂರು- ಮಾದೋಡಿ ಸಂಪರ್ಕ ರಸ್ತೆಯ ರೈಲ್ವೆ ಸೇತುವೆ ಕೆಳಭಾಗದಲ್ಲಿ ಹೊಳೆ ಬದಿಯಲ್ಲಿ ದೊಡ್ಡದೊಂದು ತಿರುವು ಕೂಡಾ ಇದ್ದು ಮಳೆಗಾಲದಲ್ಲಿ ಈ ರಸ್ತೆಯಲ್ಲಿ ಸಂಚರಿಸಿದರೆ ಅಪಾಯ ಕಟ್ಟಿಟ್ಟ ಬುತ್ತಿ.