ನವದೆಹಲಿ: ಮೊಬೈಲ್ ಆಪ್ ಹಾಗೂ ಸ್ತ್ರೀಮಿಂಗ್ ಒಟಿಟಿಗಳ ಮೂಲಕ ಅಶ್ಲೀಲ ಸಿನಿಮಾ ಹಾಗೂ ವಿಡಿಯೋಗಳನ್ನು ಪ್ರಸಾರ ಮಾಡುತ್ತಿದ್ದ ಆರೋಪದ ಮೇಲೆ ಖ್ಯಾತ ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ ಯವರ ಪತಿ, ಉದ್ಯಮಿಯೂ ಆಗಿರುವ ರಾಜ್ ಕುಂದ್ರಾ ಅವರನ್ನು ಮುಂಬೈ ಕ್ರೈಂ ಬ್ರ್ಯಾಂಚ್ ಪೊಲೀಸರು ಬಂಧಿಸಿದ್ದಾರೆ.
ಅಶ್ಲೀಲ ಸಿನಿಮಾಗಳ ತಯಾರಿಯ ಕಿಂಗ್ ಪಿನ್ ಕುಂದ್ರಾ ಎಂಬ ಬಗ್ಗೆ ಸಾಕಷ್ಟು ಸಾಕ್ಷ್ಯಗಳು ಲಭಿಸಿದ ಆಧಾರದ ಮೇರೆಗೆ ಅವರನ್ನು ಬಂಧಿಸಲಾಗಿದೆ ಎಂದು ಮುಂಬೈ ಪೊಲೀಸ್ ಕಮಿಷನರ್ ತಿಳಿಸಿದ್ದಾರೆ.
ಅಶ್ಲೀಲ ಸಿನಿಮಾಗಳನ್ನು ಕೆಲವು ಆಪ್ ಗಳ ಮೂಲಕ ಪ್ರಸಾರ ಮಾಡುತ್ತಿರುವ ಕುರಿತು 2021ರ ಫೆಬ್ರವರಿಯಲ್ಲಿ ಮುಂಬೈ ಕ್ರೈಂ ಬ್ರ್ಯಾಂಚ್ ನಲ್ಲಿ ಪ್ರಕರಣ ದಾಖಲಾಗಿತ್ತು. ಇದೇ ವಿಷಯಕ್ಕೆ ಸಂಬಂಧಿಸಿದಂತೆ 2021ರ ಜುಲೈ 19ರಂದು ರಾಜ್ ಕುಂದ್ರಾ ಅವರನ್ನು ವಿಚಾರಣೆಗೆ ಕರೆಸಿದ ಕ್ರೈಂ ಬ್ರ್ಯಾಂಚ್ ಪೊಲೀಸರು ಬಂಧಿಸಿದ್ದಾರೆ.
ಹಲವು ಉದಯೋನ್ಮುಖ ನಟಿಯರಿಗೆ, ಸಿನಿಮಾಗಳಲ್ಲಿ ಅವಕಾಶ ಕೇಳಿಕೊಂಡು ಬರುತ್ತಿರುವ ಯುವತಿಯರಿಗೆ ವೆಬ್ ಸಿರೀಸ್ ಗಳಲ್ಲಿ ಪಾತ್ರ ಕೊಡುವ ಅಮೀಷವೊಡ್ಡಿ ಈ ಅಶ್ಲೀಲ ಸಿನಿಮಾಗಳನ್ನು ಚಿತ್ರಿಕರಿಸಲಾಗುತಿತ್ತು ಎಂದು ಆರೋಪಿಸಲಾಗಿತ್ತು. ಈ ರೀತಿ ಅವಕಾಶ ಕೇಳಿ ಬಂದ ಯುವತಿಯರನ್ನು ಅರೆ ನಗ್ನಗೊಳಿಸಿ ವಿಡೀಯೊ ಚಿತ್ರಿಕರಿಸಲಾಗುತಿತ್ತು.
ಕಳೆದ ವರ್ಷ ಹಲವು ಮೊಬೈಲ್ ಆಪ್ ಗಳು ಹಾಗೂ ಒಟಿಟಿಗಳು ಗ್ರಾಹಕರಿಂದ ಸಬ್ ಸ್ಕ್ರಿಪ್ಷನ್ ಸಂಗ್ರಹಿಸಿ ಈ ರೀತಿ ಚಿತ್ರಿಕರಿಸಿದ ಅಶ್ಲೀಲ ವಿಡೀಯೊಗಳನ್ನು ಪ್ರಸಾರ ಮಾಡುತಿತ್ತು.ಈ ರೀತಿ ವಿಡೀಯೊ ಪ್ರಸಾರ ಮಾಡುವ ಆಪ್ ಗಳ ಮಾಲಕರ ಜತೆ ಬಂಧಿತ ರಾಜ್ ಕುಂದ್ರಾ ನಿಕಟ ಸಂಬಂಧ ಹೊಂದಿದ್ದರು ಹಾಗೂ ಇಡೀ ಪ್ರಕರಣದ ರೂವಾರಿಯಾಗಿದ್ದರು ಪ್ರಕರಣದ ತನಿಖೆ ನಡೆಸುತ್ತಿರುವ ಪೊಲೀಸರು ತನಿಖೆ ವೇಳೆ ಕಂಡುಕೊಂಡಿದ್ದಾರೆ.ಕುಂದ್ರಾ ವಿರುದ್ದ ಈ ಬಗ್ಗೆ ಹಲವು ಸಾಕ್ಷ್ಯ ದೊರೆತಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ರಾಜ್ ಕುಂದ್ರಾ 2009ರಲ್ಲಿ ಮಂಗಳೂರು ಮೂಲದ ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ ಯವರನ್ನು ಮದುವೆಯಾಗಿದ್ದರು. ಈ ದಂಪತಿಗೆ ಇಬ್ಬರು ಮಕ್ಕಳಿದ್ದಾರೆ. ಇದಕ್ಕೂ ಮೊದಲು ರಾಜ್, ಕವಿತಾ ಎಂಬವರನ್ನು ಮದುವೆಯಾಗಿದ್ದು, ಆ ದಾಂಪತ್ಯಕ್ಕೆ ಒಂದು ಹೆಣ್ಣು ಮಗು ಜನಿಸಿತ್ತು.