ಕೋಟ: ಜು.12ರಂದು ನಡೆದ ಬ್ರಹ್ಮಾವರ ಸಮೀಪ ಉಪ್ಪಿನಕೋಟೆಯ ಅಪಾರ್ಟ್ಮೆಂಟ್ ನಲ್ಲಿ ವಿಶಾಲ ಗಾಣಿಗ ಕೊಲೆ ಪ್ರಕರಣಕ್ಕೆ ಸಂಬಂಧಿಸಿ ವಿಶಾಲ ಅವರ ಪತಿಯೇ ಪತ್ನಿಯ ಕೊಲೆಗೆ ಸಂಚುರೂಪಿಸಿದ್ದಾರೆ ಎಂದು ಪೊಲೀಸರ ತನಿಖೆಯಿಂದ ತಿಳಿದುಬಂದಿದೆ.
ವಿಶಾಲ ಗಾಣಿಗ ಕೊಲೆಗೆ ಅವರ ಪತಿ ರಾಮಕೃಷ್ಣ ಗಾಣಿಗನೇ ದುಬೈನಲ್ಲಿದ್ದುಕೊಂಡು ಅಂತರ್ ರಾಜ್ಯ ಬಾಡಿಗೆ ಹಂತಕರಿಗೆ ಸುಪಾರಿ ನೀಡಿದ್ದರು ಎನ್ನುವ ಮಾಹಿತಿ ಇದೀಗ ಹರಿದಾಡುತ್ತಿದೆ. ಗಂಗೊಳ್ಳಿ ಸಮೀಪ ಗುಜ್ಜಾಡಿ ನಾಯಕವಾಡಿಯ ನಿವಾಸಿ ವಾಸು ಗಾಣಿಗರ ಪುತ್ರಿ ವಿಶಾಲ ಗಾಣಿಗ ಉಪ್ಪಿನಕೋಟೆಯ ಅಪಾರ್ಟ್ಮೆಂಟ್ ನಲ್ಲಿ ನಿಗೂಢವಾಗಿ ಕೊಲೆಯಾಗಿದ್ದು, ಪ್ರಕರಣ ಸಾಕಷ್ಟು ಕುತೂಹಲಕ್ಕೆ ಕಾರಣವಾಗಿತ್ತು.
ಪ್ರಕರಣಕ್ಕೆ ಸಂಬಂಧಿಸಿ ಜಿಲ್ಲಾ ಎಸ್.ಪಿ.ಯವರ ನೇತೃತ್ವದಲ್ಲಿ ನಾಲ್ಕು ತನಿಖಾ ತಂಡಗಳು ರಚನೆಯಾಗಿದ್ದವು. ಪೊಲೀಸರು ಹೊರ ರಾಜ್ಯದಲ್ಲಿ ಅವಿತಿದ್ದ ಇಬ್ಬರು ಆರೋಪಿಗಳನ್ನು ಪತ್ತೆ ಹಚ್ಚಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ ಎನ್ನುವ ಮಾಹಿತಿ ಕೇಳಿಬರುತ್ತಿದ್ದು, ಈ ಕೊಲೆಗೆ ರಾಮಕೃಷ್ಣ ಗಾಣಿಗನೇ ಸುಪಾರಿ ನೀಡಿರುವುದಾಗಿ ಹಂತಕರು ತಿಳಿಸಿದ್ದಾರೆ ಎಂದು ತಿಳಿದುಬಂದಿದೆ. ರಾಮಕೃಷ್ಣ ಗಾಣಿಗನನ್ನು ಈಗಾಗಲೇ ಎರಡು-ಮೂರು ಬಾರಿ ಪೊಲೀಸರು ತನಿಖೆಗೊಳಪಡಿಸಿ, ಜು.18 ರಂದು ಮತ್ತೊಮ್ಮೆ ವಶಕ್ಕೆ ಪಡೆದು ಮಹತ್ವದ ವಿಚಾರಗಳನ್ನು ಹೊರಗೆಡವಿದ್ದಾರೆ ಎಂದು ತಿಳಿದುಬಂದಿದೆ.