ಜಮ್ಮು ಮತ್ತು ಕಾಶ್ಮೀರದ ಸೊಪೋರ್ ನಲ್ಲಿ ಭಾರತೀಯ ಸೇನಾಪಡೆ ಎನ್ಕೌಂಟರ್ ನಡೆಸಿದ್ದು, ಇಬ್ಬರು ಉಗ್ರರನ್ನು ಹತ್ಯೆ ಮಾಡಿದೆ ಎಂದು ತಿಳಿದು ಬಂದಿದೆ.
ಬಾರಾಮುಲ್ಲಾ ಜಿಲ್ಲೆಯ ಸೊಪೋರ್’ನ ವಾರ್ಪೊರಾ ಎಂಬ ಗ್ರಾಮದಲ್ಲಿ ಉಗ್ರರು ಅಡಗಿ ಕುಳಿತಿರುವ ಖಚಿತ ಮಾಹಿತಿ ಆಧಾರದ ಮೇಲೆ ಭದ್ರತಾ ಪಡೆಗಳು ಕಾರ್ಯಾಚರಣೆಯನ್ನು ಪ್ರಾರಂಭಿಸಿತ್ತು. ಈ ವೇಳೆ ಉಗ್ರರು ಏಕಾಏಕಿ ಭದ್ರತಾ ಪಡೆಗಳ ಮೇಲೆ ಗುಂಡಿನ ದಾಳಿ ನಡೆಸಿದ್ದಾರೆ. ಕೂಡಲೇ ಸ್ಥಳವನ್ನು ಸುತ್ತುವರೆದ ಭದ್ರತಾ ಪಡೆಗಳು ಉಗ್ರರ ದಾಳಿಗೆ ದಿಟ್ಟ ಉತ್ತರವನ್ನು ನೀಡಿದ್ದಾರೆ. ಉಗ್ರರು ಅಡಗಿರುವುದನ್ನು ಖಚಿತಪಡಿಸಿಕೊಂಡ ಭದ್ರತಾ ಪಡೆಗಳು ಮೊದಲಿಗೆ ಶರಣಾಗುವ ಅವಕಾಶವನ್ನು ನೀಡಿದ್ದಾರೆ. ಆದರೆ, ಉಗ್ರರು ಈ ಅವಕಾಶವನ್ನು ನಿರಾಕರಿಸಿದ್ದಾರೆ. ಬಳಿಕ ಎನ್ಕೌಂಟರ್ ನಡೆಸಿ ಅಡಗಿದ್ದ ಇಬ್ಬರು ಉಗ್ರರನ್ನು ಹತ್ಯೆ ಮಾಡಿದ್ದಾರೆಂದು ತಿಳಿದುಬಂದಿದೆ.
ಹತರಾದ ಇಬ್ಬರು ಭಯೋತ್ಪಾದಕರು ಲಷ್ಕರ್-ಇ-ತೊಯ್ಬಾ ಉಗ್ರ ಸಂಘಟನೆಗೆ ಸೇರಿದವರಾಗಿದ್ದಾರೆ. ಇವರಲ್ಲಿ ಒಬ್ಬನನ್ನು ಫಯಾಜ್ ವಾರ್ ಎಂದು ಗುರುತಿಸಲಾಗಿದೆ.ಈತ ಕಾಶ್ಮೀರದಲ್ಲಿ ನಡೆದಿದ್ದ ಹಲವು ದಾಳಿಯಲ್ಲಿ ಭಾಗಿಯಾಗಿದ್ದ. ಅಲ್ಲದೆ, ಸಾಕಷ್ಟು ನಾಗರೀಕರು ಹಾಗೂ ಭದ್ರತಾಪಡೆಗಳ ಸಿಬ್ಬಂದಿಯನ್ನೂ ಹತ್ಯೆ ಮಾಡಿದ್ದ ಎಂದು ಕಾಶ್ಮೀರದ ಐಜಿಪಿ ಮಾಹಿತಿ ನೀಡಿದ್ದಾರೆ.