ವಿಟ್ಲ: ಬಂಟ್ವಾಳ ತಾಲೂಕು ಕೊಳ್ನಾಡು ಗ್ರಾಮದ ಮಾದಕಟ್ಟೆ, ಪಡಾರು, ಬಾರೆಬೆಟ್ಟು, ಮುಂಡತ್ತಜೆ, ತಾಳಿತ್ತನೂಜಿ ಮತ್ತು ಪಂಜಿಗದ್ದೆ ಸುತ್ತಮುತ್ತ ಕಳೆದ ಒಂದು ತಿಂಗಳಿಂದ ಎರಡು ಚಿರತೆಗಳು ಸುತ್ತಾಡುತ್ತಿವೆ.
ಕತ್ತಲಾಗುತ್ತಿದ್ದಂತೆ ರಸ್ತೆಯಲ್ಲಿ ಸಂಚರಿಸುವ ವಾಹನಗಳಿಗೆ ಅಡ್ಡಬರುತ್ತಿರುವ ಚಿರತೆಗಳು ಬಳಿಕ ಗುಡ್ಡದಲ್ಲಿ ಮರೆಯಾಗುತ್ತಿವೆ. ಈ ಬಗ್ಗೆ ಅರಣ್ಯ ಇಲಾಖೆಗೆ ಮಾಹಿತಿ ನೀಡುತ್ತಿದ್ದರೂ ಎರಡು ಬಾರಿ ಮಾತ್ರ ಭೇಟಿ ನೀಡಿದ್ದ ಅರಣ್ಯ ಅಧಿಕಾರಿಗಳು ಬಳಿಕ ಮರೆಯಾಗಿದ್ದಾರೆಂದು ಜನ ಆರೋಪಿಸಿದ್ದಾರೆ.
ಬೋನು ತಂದಿಡುವಂತೆ ಸ್ಥಳೀಯರು ಒತ್ತಾಯಿಸಿದಾಗ ಶನಿವಾರ ತಂದಿಡುತ್ತೇವೆ ಎಂದು ಹೇಳಿ ಹೋಗಿದ್ದ ಅರಣ್ಯ ಅಧಿಕಾರಿಗಳು ಮೂರು ವಾರಗಳು ಕಳೆದರೂ ಇತ್ತ ಕಡೆ ತಲೆ ಹಾಕಿಲ್ಲವೆಂದು ಇಲ್ಲಿನ ಜನ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಅರಣ್ಯ ಅಧಿಕಾರಿಗಳ ಬೇಜವಾಬ್ದಾರಿಯಿಂದ ರೋಸಿ ಹೋಗಿರುವ ಸ್ಥಳೀಯ ಯುವಕರು ಶುಕ್ರವಾರ ಸಂಜೆ ಸಭೆ ಸೇರಿದ್ದು ಶನಿವಾರದಿಂದ ಆಪರೇಶನ್ ಚೀತಾ ಕಾರ್ಯಾಚರಣೆ ನಡೆಸುವುದಾಗಿ ತೀರ್ಮಾನಿಸಿದ್ದು, ಸ್ಥಳೀಯ ಉತ್ಸಾಹಿ ಯುವಕರು ಸಮಾಜಮುಖಿ ಕಾರ್ಯಗಳಿಂದ ಹೆಸರು ಗಳಿಸಿದ್ದ ಮುರಳೀಧರ ವಿಟ್ಲ ನೇತೃತ್ವದ ‘ಫ್ರೆಂಡ್ಸ್ ವಿಟ್ಲ’ದ ಮೊರೆ ಹೋಗಿದ್ದರು. ತಕ್ಷಣವೇ ಸ್ಪಂದಿಸಿದ ಮುರಳೀಧರ ವಿಟ್ಲ ಇಂದು(ಶನಿವಾರ) ತನ್ನ ತಂಡದೊಂದಿಗೆ ಆಗಮಿಸಿ “ಆಪರೇಷನ್ ಚೀತಾ” ಕಾರ್ಯಾಚರಣೆಯ ಪ್ರಥಮ ಹಂತವಾಗಿ ಗುಡ್ಡದಲ್ಲಿ ಚಿರತೆ ಸೆರೆಗಾಗಿ ಬೋನು ಇರಿಸಿದ್ದಾರೆ.
ಫ್ರೆಂಡ್ಸ್ ವಿಟ್ಲ ಹಾಗೂ ಸ್ಥಳೀಯ ಯುವಕರ ಕಾರ್ಯ ಸಾರ್ವಜನಿಕರ ಪ್ರಶಂಸೆಗೆ ಪಾತ್ರವಾಗಿದೆ.